ಬಂಟ್ ಸಮುದಾಯದವರು ಶ್ರಮಜೀವಿಗಳು

h4-Bhants 2
Published on

ಹುಬ್ಬಳ್ಳಿ: ಬಂಟ್ ಸಮುದಾಯದವರು ಶ್ರಮಜೀವಿಗಳು. ತಾವು ಬೆಳೆಯುವುದಲ್ಲದೇ ಇತರರನ್ನು ಬೆಳೆಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದವರನ್ನೂ ಮೇಲೆತ್ತಲು ಪ್ರಯತ್ನಿಸುತ್ತಿದ್ದಾರೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹಕೂಟ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಂದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ಬಂಟರು. ಸಣ್ಣ ಉದ್ಯಮ ಆರಂಭಿಸಿ ಅದಕ್ಕೊಂದು ಬ್ರಾೃಂಡ್ ರೂಪಿಸಿ ಮಾರುಕಟ್ಟೆಗೆ ವಿಸ್ತರಿಸುವುದರಲ್ಲಿ ಅವರ ಕಾರ್ಯಕ್ಷಮತೆ ಮಾದರಿ. ಸಂಘಟನೆ ಇದ್ದಾಗ ಮಾತ್ರ ಸಾಧನೆ ಸಾಧ್ಯ. ಕಷ್ಟಪಟ್ಟಾಗ ಗುರಿ ಮುಟ್ಟಬಹುದು. ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ ಬಟ್ ಸಮುದಾಯದವರು ಮುಂದೆ ಬರುತ್ತಿದ್ದಾರೆ ಎಂದು ಬಣ್ಣಿಸಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ನಮ್ಮ ಊರು, ಭಾಷೆ ಬಗ್ಗೆ ಅಭಿಮಾನವಿದೆ. ಬಹಳಷ್ಟು ಜನರು ಊರು ಬಿಟ್ಟು ಮುಂಬೈ, ಬೆಂಗಳೂರಿಗೆ ಹೋಗಿದ್ದಾರೆ. ಅವರು ಮರಳಿ ಬರಬೇಕು. ತಮ್ಮ ಊರಿನಲ್ಲಿಯೇ ಉದ್ಯಮ, ಕಂಪನಿ ಆರಂಭಿಸಿ ಇತರರಿಗೆ ಮಾದರಿಯಾಗಬೇಕು. ಎಷ್ಟೇ ದೂರ ಹೋದರೂ ಊರಿನ ಸಂಬಂಧವನ್ನು ಬಿಟ್ಟುಕೊಡಬಾರದು ಎಂದು ಕಿವಿ ಮಾತು ಹೇಳಿದರು.
ಉದ್ಯಮಿ ಯು.ಬಿ. ಶೆಟ್ಟಿ ಮಾತನಾಡಿ, ಸಹನೆ ಎಂಬುದು ಬಂಟರ ಒಳಗಿರುವ ದೊಡ್ಡ ಗುಣ. ಎಷ್ಟೇ ಕಷ್ಟ ಬಂದರೂ ಸಹನೆಯಿಂದ ಎಲ್ಲವನ್ನು ಎದುರಿಸುತ್ತಾರೆ. ಉದ್ಯೋಗ ಮತ್ತು ಜೀವನದಲ್ಲಿ ವ್ಯತ್ಯಾಸವಾದರೆ ಸಹನೆ ಕಳೆದುಕೊಳ್ಳಬಾರದು ಎಂದರು.
ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಪ್ರಕಾಶ ಶೆಟ್ಟಿ ಅವರಿಗೆ ಹು-ಧಾ ಬಂಟರ ಸಂಘದ ಮೇಲೆ ಅತೀವ ಅಭಿಮಾನವಿದೆ. ನಾನು ಅವರಿಗೆ ಏನೇ ಕೇಳಿದರೂ, ಹೇಳಿದರೂ ಸಾಕಷ್ಟು ಸಹಾಯಹಸ್ತ ಚಾಚುತ್ತಾರೆ. ನಮ್ಮ ಸಮಾಜದ ಅಭಿವೃದ್ಧಿಗೆ ಎಲ್ಲರೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸ್ಮರಿಸಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಇತರ ಕೋರ್ಸ್ ಅಧ್ಯಯನ ಮಾಡುತ್ತಿರುವ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಇದೇ ವೇಳೆ ದಿನೇಶ ಶೆಟ್ಟಿ ಸಂಪಾದಕತ್ವದ ಬಂಟಧ್ವನಿ ಸಂಚಿಕೆ ಬಿಡುಗಡೆ ಮಾಡಲಾಯಿತು.
ಹು-ಧಾ ಬಂಟರ ಸಂಘದ ಉಪಾಧ್ಯಕ್ಷ ಶಾಂತಾರಾಮ ಶೆಟ್ಟಿ, ಪ್ರಸನ್ನ ಶೆಟ್ಟಿ, ಜಯರಾಮ ಶೆಟ್ಟಿ, ದೀಪಕ ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರಶಾಂತ ಶೆಟ್ಟಿ, ಬೆಳಗಾವಿ ಬಂಟರ ಸಂಘದ ಅಧ್ಯಕ್ಷ ವಿಠ್ಠಲ್ ಹೆಗ್ಡೆ, ಮಹೇಶ ಶೆಟ್ಟಿ, ರೂಪಾ ಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net