

ಬನ್ನೂರು: ಹಸಿರು ಟವಲ್ ಹಾಕಿಕೊಂಡು, ರೈತ ಪರವಾಗಿ ನಿಂತಿದ್ದೇವೆ ಎಂದು ಫೋಸು ಕೊಡುವ ನಾಯಕರಿಗೆ ಕೃಷಿಕಪರ ಕಾಳಜಿ ಇಲ್ಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಹೇಳಿದರು. ಅವರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಬ್ಬ ಕೃಷಿ ಸಚಿವರಾಗಿ, ರೈತನ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮವನ್ನು ರೂಪಿಸಿ, ಬಡ ರೈತರ ಅಭಿವೃದ್ಧಿಗೆ ಆಶಾಕಿರಣವಾಗಿದ್ದ ಚೌಧರಿ ಚರಣ್‌ಸಿಂಗ್ ಅವರನ್ನು ಪ್ರತಿಯೋಬ್ಬ ರೈತರೂ ಸ್ಮರಿಸಿಕೊಳ್ಳಬೇಕು ಎಂದರು. ಇಂದಿನ ರಾಜಕೀಯ ನಾಯಕರಿಗೆ, ಕೃಷಿ ಸಚಿವರಿಗೆ ಚೌಧರಿ ಚರಣ್ ಸಿಂಗ್ ಅವರ ನಡೆ-ನುಡಿ ಮತ್ತು ಕಾರ್ಯಕ್ಷಮತೆ ಮಾದರಿ ಆಗಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ರಾಜಕೀಯ ನೇತಾರರು, ಕೃಷಿ ಸಚಿವರುಗಳು ಸಾಗಿದ್ದರೆ ಇಂದು ಸಾವಿರಾರು ರೈತರ ಬದುಕು ಹಸನಾಗಿರುತ್ತಿತ್ತು ಎಂದರು.
ಇಂದಿನ ನಾಯಕರು ಅಧಿಕಾರಕ್ಕೆ ಬರುವ ಮುನ್ನ ಹಸಿರು ಟವೆಲ್‌ಗಳನ್ನು ಹಾಕಿಕೊಂಡು ನಾವೆಲ್ಲಾ ರೈತ ಪರವಾಗಿ ನಿಂತಿದ್ದೇವೆಂದು ತೋರಿಸಿಕೊಳ್ಳುತ್ತಾರೆ. ನಂತರ ಅನ್ನದಾತರ ಕಷ್ಟಗಳಿಗೆ ಸ್ಪಂದಿಸುವುದೇ ಇಲ್ಲ. ಯಾವ ನೆರವು, ಸರ್ಕಾರದ ಸವಲತ್ತುಗಳನ್ನೂ ಪ್ರಾಮಾಣಿಕವಾಗಿ ಕೃಷಿಕರಿಗೆ ತಲುಪಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ಟನ್ ಭತ್ತ ಬೆಳೆಯುತ್ತಿದ್ದ ರೈತರು ಇಂದು 25 ರಿಂದ 30 ಟನ್ ಭತ್ತ ಬೆಳೆಯುತ್ತಿದ್ದಾರೆಂದರೆ ಅದರ ಹಿಂದೆ ಚೌಧರಿ ಚರಣ್‌ಸಿಂಗ್ ಪಾತ್ರವಿದೆ. ಅವರ ಹೆಸರಿನಲ್ಲೇ ಇಂದು ವಿಶ್ವ ರೈತ ದಿನವನ್ನು ಆಚರಿಸಲಾಗುತ್ತಿದೆ ಎಂದು ಸ್ಮರಿಸಿದರು.
ರೈತ ದಿನಾಚರಣೆಯ ಸಂದರ್ಭದಲ್ಲಿ ತಾಲೂಕು, ಹೋಬಳಿ ಮಟ್ಟದಲ್ಲಿ ಸಾಧಕ ರೈತರನ್ನು ಸರ್ಕಾರ. ಕೃಷಿ ಇಲಾಖೆ ಗುರುತಿಸಿ ಗೌರವಿಸುವ ಕೆಲಸವನ್ನಾದರೂ ಮಾಡಬೇಕು ಎಂದವರು ಒತ್ತಾಯಿಸಿದರು.