ಬನ್ನೂರು ನೂತನ ಸೇತುವೆ ನಿರುಪಯುಕ್ತ

IMG_20250608_113501
ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದ ಬಳಿ ಕಾವೇರಿ ನದಿಗೆ ನಿರ್ಮಾಣವಾಗಿರುವ ನೂತನ ಸೇತುವೆ ನಿರುಪಯುಕ್ತವಾಗಿರುವುದು.
Published on

ತಿ.ನರಸೀಪುರ: ಭೂಸ್ವಾಧೀನ ಪ್ರಕ್ರಿಯೆ ಹಾಗೂ ಸೇತುವೆಯ ಸಂಪರ್ಕ ರಸ್ತೆ ನಿರ್ಮಾಣವಾಗದ ಕಾರಣ ತಾಲೂಕಿನ ಬನ್ನೂರು ಪಟ್ಟಣದ ಹೊರವಲಯದಲ್ಲಿ ಕೋಟ್ಯಂತರ ರೂ. ವ್ಯಯಿಸಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಸೇತುವೆ ಹಲವು ವರ್ಷಗಳಿಂದ ನಿರುಪಯುಕ್ತವಾಗಿದೆ.

ತಾಲೂಕಿನ ಬನ್ನೂರು ಪಟ್ಟಣದ ಮಾರ್ಗವಾಗಿ ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಮಳವಳ್ಳಿಗೆ ಸಂಪರ್ಕ ಕಲ್ಪಿಸುವ ಕಾವೇರಿ ನದಿಗೆ ಸುಸಜ್ಜಿತವಾದ ಸೇತುವೆ ನಿರ್ಮಿಸಿ ಹಲವು ವರ್ಷಗಳೇ ಕಳೆದಿವೆ. ಸೇತುವೆ ಕೊನೆಗೊಳ್ಳುವ ಎರಡೂ ಕಡೆ ಸೇತುವೆ ಸಂಪರ್ಕ ರಸ್ತೆಯನ್ನೇ ನಿರ್ಮಾಣ ಮಾಡಿಲ್ಲ. ಮುಂದುವರಿದ ಕಾಮಗಾರಿಗೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದರಿಂದ ವಾಹನಗಳ ಓಡಾಟಕ್ಕೆ ಬಳಕೆಯಾಗಬೇಕಿದ್ದ ನೂತನ ಸೇತುವೆ ಸ್ಥಗಿತವಾಗಿದೆ.

ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರು ಉಪ ನಗರದಂತೆ ಬೆಳೆಯುತ್ತಿರುವ ಬನ್ನೂರು ಪಟ್ಟಣದ ಅಭಿವೃದ್ಧಿಗೆ ಭರಪೂರ ಅನುದಾನ ನೀಡಿದ ಸಂದರ್ಭದಲ್ಲಿ ಕಾವೇರಿ ನದಿಯ ಹಳೇ ಸೇತುವೆ ಕಿರಿದಾಗಿದ್ದನ್ನು ಅರಿತು, ವಾಹನಗಳ ದಟ್ಟಣೆಯ ಸಂಚಾರವನ್ನು ಅರಿತು ಕಳೆದ 2017ರಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂ. ಮಂಜೂರು ಮಾಡಿ ಕಾಮಗಾರಿ ನಿರ್ವಹಣೆ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿ, ಭೂಮಿಪೂಜೆ ನೆರವೇರಿಸಿದ್ದರು.

ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವಾಗಲೇ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿ, ಫಲಿತಾಂಶದಲ್ಲಿ ಸರ್ಕಾರ ಮತ್ತು ಶಾಸಕರು ಬದಲಾಗಿದ್ದರಿಂದ ಕೋವಿಡ್ ಸಂದರ್ಭದಲ್ಲಿ ಅನುದಾನವನ್ನು ಹಿಂಪಡೆದ್ದರಿಂದ ಸೇತುವೆ ನಿರ್ಮಾಣ ಸ್ಥಗಿತಗೊಂಡಿತು. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಶಾಸಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾದ ಮಹದೇವಪ್ಪ ಅವರು ವಾಪಸ್ ಆಗಿದ್ದ ಅನುದಾನವನ್ನು ಮಂಜೂರು ಮಾಡಿಸಿ, ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ. ಸೇತುವೆಯ ಸಂಪರ್ಕ ರಸ್ತೆಯ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕಾಗಿ 4.79 ಕೋಟಿ ರೂ. ಹಾಗೂ ಮುಂದುವರಿದ ಕಾಮಗಾರಿಗೆ 9.95 ಕೋಟಿ ರೂ. ಸಿಆರ್‌ಇ ಅನುದಾನವನ್ನು ಮಂಜೂರು ಮಾಡಿದ್ದರೂ ಮುಂದುವರಿದ ಕಾಮಗಾರಿ ಪ್ರಕ್ರಿಯೆಯನ್ನೇ ಇನ್ನೂ ಅಧಿಕಾರಿಗಳು ಆರಂಭಿಸಿಲ್ಲ.

ರಾಜ್ಯ ಸರ್ಕಾರದ ಶಾಶ್ವತ ಯೋಜನೆಗಳಿಗೆ ಅಥವಾ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ನಡೆಸಿಕೊಡಬೇಕು. ವಾಸ್ತವವಾಗಿ ಉಪ ವಿಭಾಗಾಧಿಕಾರಿಗಳು ಅಥವಾ ತಹಸೀಲ್ದಾರರಿಗೆ ಬನ್ನೂರು ಪಟ್ಟಣದ ಕಾವೇರಿ ನದಿಯ ನೂತನ ಸೇತುವೆ ಆಸುಪಾಸಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ಭೂ ಸ್ವಾಧೀನಕ್ಕೆ ಮಂಜೂರು ಮಾಡಿರುವ 4.79 ಕೋಟಿ ಹಣವನ್ನು ಕಾಯ್ದಿರಿಸಿಕೊಂಡಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಂದುವರಿದ ಕಾಮಗಾರಿಗೆ ಮಂಜೂರಾದ 9.95 ಕೋಟಿ ಅನುದಾನಕ್ಕೆ ಟೆಂಡರ್ ಕರೆದಿದ್ದೇವೆ. ಸದ್ಯದಲ್ಲಿಯೇ ಗುತ್ತಿಗೆ ಸಂಸ್ಥೆಯನ್ನು ನಿಯೋಜಿಸುತ್ತೇವೆ ಎಂದು ಕೈಕಟ್ಟಿ ಕುಳಿತುಬಿಟ್ಟಿದ್ದಾರೆ.

ಮದ್ಯ ಕುಡಿಯಲು ಪ್ರಶಸ್ತ ಸ್ಥಳ

ಕಾವೇರಿ ನದಿ ತೀರ ಪ್ರಶಾಂತವಾಗಿದ್ದು, ಪಕ್ಕದಲ್ಲಿಯೇ ಸಮುದಾಯ ಮತ್ತು ಪುರಸಭೆಯ ರುದ್ರಭೂಮಿ ಇರುವುದರಿಂದ ಸಂಜೆಯಾಗುತ್ತಿದ್ದಂತೆ ಎಣ್ಣೆ ಪಾರ್ಟಿ ಮಾಡಲು ಮದ್ಯಪ್ರಿಯರು ಸೇರುವುದರಿಂದ ನೂತನ ಸೇತುವೆ ಮೇಲೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಕುಡಿದ ಬಾಟಲಿಗಳನ್ನು ಬಿಸಾಡಲಾಗಿದೆ. ಆರು ವರ್ಷಗಳ ಕಾಲ ಸ್ಥಗಿತವಾಗಿದ್ದ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳಾದರೂ ಮುಕ್ತ ಸಂಚಾರಕ್ಕೆ ಬಳಕೆ ಆಗದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಕೇಳಿ ಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ, ನಿವೃತ್ತ ಮುಖ್ಯ ಇಂಜಿನಿಯರ್ ಎನ್.ರವಿಕುಮಾರ್ ಅವರು ಭೂ ಸ್ವಾಧೀನಕ್ಕೆ ಮತ್ತು ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಟೆಂಡರ್ ಕರೆದಿದ್ದೇವೆ. ಸದ್ಯದಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಮುಂದುವರಿದ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.

ತ್ರೈಮಾಸಿಕ ಕೆಡಿಪಿ ಸಭೆಯಲ್ಲೂ ಪ್ರಸ್ತಾಪವಿಲ್ಲ

ಬನ್ನೂರು ಪಟ್ಟಣದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಸೇತುವೆ ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣವಾಗದೆ ನಿರುಪಯುಕ್ತವಾಗಿರುವ ಬಗ್ಗೆ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗದಿರುವುದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನಿದರ್ಶನವಾಗಿದೆ.

ಮೈಸೂರಿನಿಂದ ಬನ್ನೂರು ಮಾರ್ಗವಾಗಿ ಮಳವಳ್ಳಿ, ಕನಕಪುರ ಹಾಗೂ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಕಿರಿದಾಗಿರುವ ಹಳೆಯ ಸೇತುವೆ ಮೇಲೆ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದ್ದು, ಕೆಲವು ತಿಂಗಳ ಹಿಂದೆಯಷ್ಟೇ ದ್ವಿಚಕ್ರ ವಾಹನದಲ್ಲಿ ವೇಗವಾಗಿ ತೆರಳುತ್ತಿದ್ದ ಅಮ್ಮ, ಮಗ ಇಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸೇತುವೆ ಮೇಲೆ ವೇಗದಲ್ಲಿ ಹೋಗುವಾಗ ಬಸ್, ಲಾರಿ ಹಾಗೂ ಭಾರಿ ಗಾತ್ರದ ಟ್ರಕ್‌ಗಳು ಎದುರಾದಾಗ ದ್ವಿಚಕ್ರ ಹಾಗೂ ಲಘು ವಾಹನ ಸವಾರರು ಭಯದಲ್ಲಿಯೇ ಚಾಲನೆ ಮಾಡಬೇಕಾದ ಪರಿಸ್ಥಿತಿ ಇದೆ.

ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆಯನ್ನು ನಡೆಸಿ, ಸೇತುವೆ ಸಂಪರ್ಕ ರಸ್ತೆಯನ್ನು ನಿರ್ಮಿಸಿ ನಿರುಪಯುಕ್ತವಾಗಿರುವ ನೂತನ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಚಿವರ ವಿಶೇಷ ಕಾಳಜಿ ವಹಿಸಿದ್ದರಿಂದ ಬನ್ನೂರು ಪಟ್ಟಣದ ಕಾವೇರಿ ನದಿ ನೂತನ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ. ರಾಜ್ಯ ಸರ್ಕಾರದಿಂದಲೂ ಭೂ ಸ್ವಾಧೀನಕ್ಕೆ ಹಾಗೂ ಸೇತುವೆಯ ಸಂಪರ್ಕ ರಸ್ತೆಯನ್ನ ನಿರ್ಮಾಣ ಮಾಡಲು ಮುಂದುವರಿದ ಕಾಮಗಾರಿಗೆ ಅನುದಾನವನ್ನು ಮಂಜೂರು ಮಾಡಿಸಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿಯನ್ನು ಆರಂಭಿಸುತ್ತೇವೆ. ಎಸ್.ಸತೀಶ್ ಚಂದ್ರನ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಹಾಗೂ ಒಳನಾಡು ಜಲ ಸಾರಿಗೆ ಇಲಾಖೆ ಉಪ ವಿಭಾಗ, ತಿ.ನರಸೀಪುರ ಕಾವೇರಿ ನದಿ ನೂತನ ಸೇತುವೆ ನಿರ್ಮಾಣದ ಅನುದಾನವನ್ನು ಹಿಂದಿನ ಸರ್ಕಾರ ಹಿಂಪಡೆದಿದ್ದರಿಂದ ಹಾಗೂ ಅಂದಿನ ಶಾಸಕರ ಬೇಜವಾಬ್ದಾರಿಯಿಂದ ಕಾಮಗಾರಿ ನಿಂತು ಹೋಗಿತ್ತು. ಈಗ ಸೇತುವೆ ನಿರ್ಮಾಣಗೊಂಡಿದೆಯಾದರೂ ಭೂ ಸ್ವಾಧೀನ ಮತ್ತು ಸಂಪರ್ಕ ರಸ್ತೆ ನಿರ್ಮಾಣ ಆಗದಿರುವುದರಿಂದ ಸುಸಜ್ಜಿತ ಸೇತುವೆ ನಿರುಪಯುಕ್ತವಾಗಿದೆ. ಸುಗಮ ಸಂಚಾರ ಹಾಗೂ ಅಪಘಾತಗಳನ್ನು ತಡೆಗಟ್ಟಲು ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಬೇಕಾದ ಅಗತ್ಯವಿದೆ. ಅನುದಾನ ಲಭ್ಯವಿರುವುದರಿಂದ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಆಡಳಿತಾತ್ಮಕ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು. ಕೇತುಪುರ ಶಿವಕುಮಾರ್ ಬನ್ನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net