

ಬನ್ನೂರು : ಕುಷ್ಠರೋಗವು ಸಂಪೂರ್ಣ ವಾಸಿಯಾಗುವಂತ ಕಾಯಿಲೆಯಾಗಿದ್ದು, ಇದಕ್ಕೆ ಸರ್ಕಾರಿ ಆಸ್ಪತೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ.ಬೃಂದಾ ತಿಳಿಸಿದರು.
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕುಷ್ಠರೋಗಕ್ಕೆ ಇರುವ ಉಚಿತ ಚಿಕಿತ್ಸೆಯನ್ನು ಸಮರ್ಪಕವಾಗಿ ಬಳಸಿಕೊಂಡು ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗಬೇಕು. ಈಗಾಗಳೇ ಈ ನಿಟ್ಟಿನಲ್ಲಿ ಇಲಾಖೆ ಹಲವು ಶಿಬಿರವನ್ನು ಮಾಡಿದೆ. ಸೂಕ್ತ ಚಿಕಿತ್ಸೆಯನ್ನೂ ಜಿಲ್ಲೆಯ ವಿವಿಧೆಡೆ ನೀಡಲಾಗಿದೆ. ಹಲವರು ಸಂಪೂರ್ಣ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ರೋಗ ನಿರ್ಮೂಲನೆಯ ಹಂತ ತಲುಪಿದೆ ಎಂದು ತಿಳಿಸಿದರು.
ಆಪಾಯದಿಂದ ಮುಕ್ತಿ ಪಡೆಯಿರಿ: ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಾಲತೇಶ್ ಮಾತನಾಡಿ, ಈ ರೋಗದ ಬಗ್ಗೆ ಹಲವು ತಪ್ಪು ಕಲ್ಪನೆ ಇದೆ. ಅದನ್ನು ನಿವಾರಿಸುವಲ್ಲಿ ಎಲ್ಲರೂ ಗಮನಹರಿಸಬೇಕು ಎಂದು ವಿನಂತಿಸಿದರು. ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಈ ಕಾಯಿಲೆ ಮೈಕ್ರೋ ಬ್ಯಾಕ್ಟೀರಿಯಾ ಲೆಪ್ಪೆ ಎಂಬ ರೋಗಾಣುವಿನಿಂದ ಬರುತ್ತದೆ. ಇದರ ಲಕ್ಷಣ ಕಂಡುಬಂದ ಕೂಡಲೇ ವೈದ್ಯರಿಗೆ ತೋರಿಸಿ ಸಲಹೆ ಪಡೆಯಬೇಕು. ಮುಂದೆ ಆಗಬಹುದಾದ ಆಪಾಯದಿಂದ ಮುಕ್ತಿ ಪಡೆಯಬೇಕು ಎಂದರು.
ಅಂತರ ಪಾಲನೆ ಮಾಡಿ: ತಾಲೂಕು ಆರೋಗ್ಯ ನಿರೀಕ್ಷಣಾ ಅಧಿಕಾರಿ ಡಾ.ಸುಮಂತ್ ಮಾತನಾಡಿ, ದೇಹದ ಯಾವುದೇ ಭಾಗದಲ್ಲಿ ತುರಿಕೆ, ತಿಳಿ ಬಿಳಿ ಅಥವಾ ತಾಮ್ರ ವರ್ಣದ ಲಕ್ಷಣ, ಸ್ಪರ್ಶ ಇಲ್ಲದಂಥ ಮಚ್ಚೆ, ಕೈಕಾಲು ಜೋಮು ಹಿಡಿಯುವುದು ಮತ್ತು ನರಗಳು ದಪ್ಪಗಾಗುವುದು, ಮುಖ ಮತ್ತು ಬೆನ್ನಿನ ಮೇಲಿನ ಚರ್ಮ ದಪ್ಪಗಾಗುವುದು ಇತ್ಯಾದಿ ಕಂಡು ಬಂದರೆ ಅವು ಕುಷ್ಠ ರೋಗದ ಲಕ್ಷಣಗಳು. ಕುಷ್ಠರೋಗಿಯು ಸೀನಿದಾಗ ಅಥವಾ ಕೆಮ್ಮಿದಾಗ, ಸಿಂಬಳ ಮತ್ತು ಕಫದ ಮೂಲಕ ರೋಗವು ಇತರರಿಗೂ ಹರಡುತ್ತದೆ. ಹಾಗಾಗಿ ರೋಗಿಗಳು ಎಲ್ಲರೊಂದಿಗೆ ಅಂತರ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು. ತಾಲೂಕು ಆರೋಗ್ಯ ನಿರೀಕ್ಷಣಾ ಅಧಿಕಾರಿ ಡಾ.ಸುಮಂತ್, ಸ್ಥಳೀಯ ಆಡಳಿತಾ ವೈದ್ಯಾಧಿಕಾರಿ ಡಾ. ಮಾಲತೇಶ್, ಚರ್ಮರೋಗ ವೈದ್ಯೆ ಡಾ.ಐಶ್ವರ್ಯಾ, ಭೌತ ಚಿಕಿತ್ಸಕಿ ಡಾ. ಶ್ರುತಿ, ಸಹಾಯಕ ಅಧಿಕಾರಿ ಅನಿಲ್‌ಕ್ರಿಸ್ಟಿ , ಅರೆ ವೈದ್ಯಕೀಯ ಕಾರ್ಯಕರ್ತ ಮಹೇಶ್, ಅರೋಗ್ಯ ನಿರೀಕ್ಷಣಾಧಿಕಾರಿ ಹೇಮಂತ್ ಕುಮಾರ್, ಹಿರಿಯ ಔಷಾಧಾಲಯ ಅಧಿಕಾರಿ ಆನಂದ್ ಇತರರು ಉಪಸ್ಥಿತರಿದ್ದರು.