

ಶಿವಮೊಗ್ಗ: ಆರ್‌ಎಸ್‌ಎಸ್ ತಂಟೆಗೆ ಹೋದರೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಬಹುತೇಕ ರಾಜ್ಯಗಳಲ್ಲಿ ತಿರಸ್ಕೃತವಾಗಿರುವ ಕಾಂಗ್ರೆಸ್ ಬೆರಳೆಣಿಕೆ ರಾಜ್ಯಗಳಲ್ಲಿ ಜೀವ ಉಳಿಸಿಕೊಂಡಿದೆ. ಆರ್‌ಎಸ್‌ಎಸ್ ವಿರುದ್ಧ ಹುಚ್ಚಾಟದ ತೀರ್ಮಾನ ತೆಗೆದುಕೊಂಡರೆ ಕಾಂಗ್ರೆಸ್ ನಿರ್ನಾಮ ಖಚಿತ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಸರ್ಕಾರಿ ಜಾಗದಲ್ಲಿ ನಿಷೇಧಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿರುವುದು ಹುಚ್ಚುತನ ಪರಮಾವಧಿ. ಪ್ರಿಯಾಂಕ್ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರ್‌ಎಸ್‌ಎಸ್ ಬಗ್ಗೆ ಅತಿರೇಕದ ಹೇಳಿಕೆ ನೀಡುತ್ತಿದ್ದಾರೆ. ಅದರ ಪರಿಣಾಮವನ್ನು ಕಾಂಗ್ರೆಸ್ ಅನುಭವಿಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಕಾಂಗ್ರೆಸ್‌ಗೆ ತಾಕತ್ತಿದ್ದರೆ ಆರ್‌ಎಸ್‌ಎಸ್ ತಂಟೆಗೆ ಹೋಗಲಿ ನೋಡೋಣ ಎಂದು ಸವಾಲು ಹಾಕಿದ ಈಶ್ವರಪ್ಪ, 100 ವರ್ಷ ಪೂರೈಸಿದ ಆರ್‌ಎಸ್‌ಎಸ್‌ಗೆ ದೊಡ್ಡ ಹಿನ್ನೆಲೆಯಿದೆ. ದಿಲ್ಲಿಯಿಂದ ಹಳ್ಳಿಯವರೆಗೆ ಕೋಟ್ಯಂತರ ಮಂದಿ ಸಂಘದ ಜತೆಗಿದ್ದಾರೆ. ಅವರೆಲ್ಲ ರಾಷ್ಟ್ರಪ್ರೇಮ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು.
1962ರಲ್ಲಿ ಚೀನಾ ವಿರುದ್ಧ ಹೋರಾಡಿ ಗಾಯಗೊಂಡ ಭಾರತದ ಸೈನಿಕರ ನೆರವಿಗೆ ಧಾವಿಸಿದ್ದು ಆರ್‌ಎಸ್‌ಎಸ್. ನೈಸರ್ಗಿಕ ವಿಕೋಪಗಳು, ಅವಘಡಗಳು ಉಂಟಾದಾಗ ಸ್ವಯಂಸೇವಕರು ಹಗಲಿರುಳು ಕೆಲಸ ಮಾಡಿದ್ದಾರೆ. ಸೇವೆ ಎಂಬುದು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ರಕ್ತಗತವಾಗಿದೆ ಎಂದು ತಿಳಿಸಿದರು.
ಆರ್‌ಎಸ್‌ಎಸ್‌ನಿಂದ ಬಂದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರಮೋದಿ ಮುಂತಾದವರು ಈ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. ಸ್ವಯಂಸೇವಕರಾಗಿದ್ದವರು ರಾಷ್ಟ್ರಪತಿ, ಉಪರಾಷ್ಟ್ರಪತಿಗಳೂ ಆಗಿದ್ದಾರೆ. ಆರ್‌ಎಸ್‌ಎಸ್‌ನಿಂದ ಪಾಠ ಕಲಿತ ನಾಯಕರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿ ಅನೇಕ ಸಾಮಾಜಿಕ, ಧಾರ್ಮಿಕ ಹೋರಾಟದಲ್ಲಿ ತೊಡಗಿಸಿಕೊಂಡ ನಿದರ್ಶನಗಳಿವೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯಶಾಸ್ತ್ರಿ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಕುಬೇರಪ್ಪ, ಚನ್ನಬಸಪ್ಪ, ಬಾಲು ಸುದ್ದಿಗೋಷ್ಠಿಯಲ್ಲಿದ್ದರು.