

ಶಿವರಾಜ ಎಂ. ಬೆಂಗಳೂರು
ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೂ ಕರೊನಾ ಲಾಕ್‌ಡೌನ್ ಬಿಸಿ ತಟ್ಟಿದೆ. ಒಂದೂವರೆ ತಿಂಗಳಲ್ಲಿ ಉದ್ಯಾನಕ್ಕೆ ಬರಬೇಕಿದ್ದ ಸುಮಾರು 7.5 ಕೋಟಿ ರೂ.ಆದಾಯ ಇಲ್ಲವಾಗಿದೆ.
ಮಾ.15ರಿಂದಲೇ ಉದ್ಯಾನಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಮಾ.14ರಂದು ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವ ಆನಂದ್‌ಸಿಂಗ್ ಕರೊನಾ ತೀವ್ರತೆ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿ ನಿಷೇಧಿಸುವಂತೆ ಸೂಚಿಸಿದ್ದರು.
ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಶಾಲಾ-ಕಾಲೇಜುಗಳ ರಜಾದಿನಗಳಾದ್ದರಿಂದ ಉದ್ಯಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಈ ಅವಧಿಯಲ್ಲಿಯೇ ಆದಾಯ ಕಡಿತವಾಗಿದೆ. ಇದರಿಂದ ಉದ್ಯಾನದ ಹಲವು ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಬೋನು, ಪ್ಲಾಂಟೇಷನ್, ಪ್ರಾಣಿಪಕ್ಷಿಗಳ ನಿರ್ವಹಣೆಗೆ ತೊಂದರೆಯಾಗಿದೆ. ಈ ಕಾರಣದಿಂದ ಅನುದಾನಕ್ಕೆ ಬೇಡಿಕೆಯಿಟ್ಟು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗುತ್ತಿಗೆ ನೌಕರರ ಸಂಬಳಕ್ಕೂ ಪರದಾಟ: ಉದ್ಯಾನದಲ್ಲಿ ಸುಮಾರು 150 ಗುತ್ತಿಗೆ ನೌಕರರು ಇದ್ದು, ಸಂಬಳ ನೀಡಲು ತೊಂದರೆಯಾಗಿದೆ. ಆದರೆ ವೇತನ ತಡೆಹಿಡಿದಿಲ್ಲ. ಕೇಂದ್ರ ಸರ್ಕಾರದ ಆದೇಶದಂತೆ ಕೆಲಸದಿಂದ ತೆಗೆದಿಲ್ಲ ಎಂದು ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ವನಶ್ರೀ ವಿಪಿನ್‌ಸಿಂಗ್ ತಿಳಿಸಿದ್ದಾರೆ.
ತೆರವಿನ ಬಳಿಕವೂ ಕಷ್ಟ: ಲಾಕ್‌ಡೌನ್ ತೆರವುಗೊಳಿಸಿದರೂ, ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡುವುದು ವಿರಳ. ಅಲ್ಲದೆ ಮುಂಜಾಗ್ರತಾ ಕ್ರಮದಿಂದಾಗಿ ಹೆಚ್ಚು ಪ್ರವಾಸಿಗರ ಭೇಟಿಗೂ ಅವಕಾಶ ನೀಡದಿರುವ ಬಗ್ಗೆ ಇಲಾಖೆ ಚಿಂತಿಸಿದೆ. ಇದೆಲ್ಲ ಕಾರಣದಿಂದ ಉದ್ಯಾನದ ಆರ್ಥಿಕ ಸ್ಥಿತಿ ಸುಧಾರಿಸಲು ತಿಂಗಳುಗಳೇ ಬೇಕು ಎಂಬುದು ಅಧಿಕಾರಿಗಳ ಅನಿಸಿಕೆ.
ದತ್ತು ಸ್ವೀಕಾರಕ್ಕೆ ಮನವಿ: ಉದ್ಯಾನದಲ್ಲಿ 23 ಆನೆಗಳು, 20 ಹುಲಿ, 19 ಸಿಂಹಗಳಿವೆ. ಇದರೊಂದಿಗೆ ಜಿರಾೆ ಮತ್ತಿತರ ಪ್ರಾಣಿಗಳಿವೆ. ಇವುಗಳ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಅವಶ್ಯಕತೆ ಇದೆ. ಪ್ರಾಣಿಪ್ರಿಯರು, ದಾನಿಗಳು ದತ್ತು ಸ್ವೀಕಾರಕ್ಕೆ ಮುಂದೆ ಬಂದರೆ ನಷ್ಟದ ಹೊರೆ ಕಡಿಮೆಯಾಗುತ್ತದೆ ಎಂಬುದು ಅಧಿಕಾರಿಗಳ ಮನವಿಯಾಗಿದೆ.
ಸಂಪರ್ಕಿಸಲು ದೂರವಾಣಿ ಸಂಖ್ಯೆ: 08029776466/77
ಲಾಕ್‌ಡೌನ್‌ನಿಂದ ಅದಾಯದ ಮೂಲಕ್ಕೆ ಪೆಟ್ಟು ಬಿದ್ದಿದೆ, ಪ್ರಾಣಿಪ್ರಿಯರು, ದಾನಿಗಳು ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಉದ್ಯಾನದ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಬೇಕು. ದತ್ತು ಸ್ವೀಕಾರಕ್ಕೆ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಮಾಹಿತಿ ಸಿಗಲಿದೆ.
ವನಶ್ರೀ ವಿಪಿನ್‌ಸಿಂಗ್, ಕಾರ್ಯನಿರ್ವಾಹಣಾ ನಿರ್ದೇಶಕಿ, ಬನ್ನೇರುಘಟ್ಟ ಜೈವಿಕ ಉದ್ಯಾನ