

ಬೆಂಗಳೂರು: ವನ್ಯಜೀವಿಗಳ ಸಂರಕ್ಷಣಾ ತಾಣವಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ಪ್ರದೇಶದ ವ್ಯಾಪ್ತಿಯನ್ನು 100 ಚದರ ಕಿ.ಮೀ. ತಗ್ಗಿಸಿ ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿದೆ.
ಉದ್ಯಾನದ ಸಮೀಪದಲ್ಲಿ ಗಣಿಗಾರಿಕೆ ಹಾಗೂ ಭೂ ಮಾಫಿಯಾ ನಡೆಸುವ ಲಾಬಿಗೆ ಮಣಿದ ರಾಜ್ಯ ಸರ್ಕಾರದ ಒತ್ತಾಸೆ ಮೇರೆಗೆ ಕೇಂದ್ರ ಈ ನಿರ್ಧಾರ ಕೈಗೊಂಡಿರುವುದು ನಾಗರಿಕರಲ್ಲಿ ಅಸಮಾಧಾನ ಮೂಡಿಸಿದೆ. ಬನ್ನೇರುಘಟ್ಟ ಪರಿಸರ ಸೂಕ್ಷ್ಮ ವಲಯವನ್ನು (ಇಎಸ್ಜಡ್) ಸಂರಕ್ಷಿಸುವುದಾಗಿ ಈ ಹಿಂದೆ ಭರವಸೆ ನೀಡಿದ್ದ ಬಿಜೆಪಿ ನಾಯಕರ ಮುಖವಾಡ ಬಯಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ರಾಜಧಾನಿ ಬೆಂಗಳೂರಿ ನಿಂದ ಕೇವಲ 22 ಕಿ.ಮೀ. ದೂರದಲ್ಲಿ 260 ಕಿ.ಮೀ. ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕಾವೇರಿ ವನ್ಯ ಜೀವಿ ಸಂರಕ್ಷಿತ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದೆ. ಸಂರಕ್ಷಿತ ಪ್ರದೇಶದ ಸುತ್ತ ಸೂಕ್ಷ್ಮ ಪ್ರದೇಶ ಇಲ್ಲದಿದ್ದಲ್ಲಿ ಅರಣ್ಯಕ್ಕೆ ತೊಂದರೆಯಾಗುತ್ತದೆ ಎಂಬ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ 2016ರಲ್ಲಿ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ರಾಷ್ಟ್ರೀಯ ಉದ್ಯಾನದ ಸುತ್ತ 268.96 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್ಜಡ್) ಎಂದು ಘೋಷಿಸಿ, ಪರಿಸರಕ್ಕೆ ಹಾನಿಯಾಗುವ ಚಟುವಟಿಕೆಗಳನ್ನು ನಿಷೇಧಿಸುವ ಪ್ರಸ್ತಾಪ ಮಾಡಲಾಗಿತ್ತು. ಆದರೆ ಈ ಕುರಿತು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಉದ್ಯಾನವು ಬೆಂಗಳೂರಿಗೆ ಹತ್ತಿರದಲ್ಲಿರುವ ಕಾರಣ ಈ ಪ್ರಮಾಣದ ಸೂಕ್ಷ್ಮ ವಲಯ ನಿರ್ವಹಿಸುವುದು ಕಷ್ಟ. ರಾಷ್ಟ್ರೀಯ ಉದ್ಯಾನದ ಸುತ್ತ 168.84 ಚ.ಕಿ.ಮೀ. ಪ್ರದೇಶವನ್ನು ಇಎಸ್ಜಡ್ ಎಂದು ಘೋಷಿಸಬೇಕು ಎಂದು ಇದಕ್ಕಾಗಿ ರಚಿಸಿದ ಸಂಪುಟ ಉಪಸಮಿತಿ 2017ರಲ್ಲಿ ನಿರ್ಧಾರ ಕೈಗೊಂಡಿತ್ತು.
ಇದೀಗ ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನ ರಾಜ್ಯ ಸರ್ಕಾರವನ್ನು ಸಂರ್ಪಸಿದ್ದ ಕೇಂದ್ರ ಕೇಂದ್ರ ಪರಿಸರ, ಅರಣ್ಯ ಹಾಗೂ ಜಲವಾಯು ಬದಲಾವಣೆ ಸಚಿವಾಲಯ, 2016ರ ಕರಡು ಪ್ರಸ್ತಾವನೆಯನ್ನೇ ಉಳಿಸಿಕೊಳ್ಳುವ ಬಗ್ಗೆ ಹಾಗೂ ಹೊಸ ಪ್ರಸ್ತಾವನೆಯಿಂದ ಆನೆ ಕಾರಿಡಾರ್ಗೆ ಆಗುವ ಅಪಾಯದ ಕುರಿತು ವರದಿ ಕೇಳಿತ್ತು. ಮತ್ತೆ 2017ರ ನಿರ್ಧಾರವನ್ನೇ ಪುನುಚ್ಚರಿಸಿದ್ದ ರಾಜ್ಯ ಸರ್ಕಾರ, 168.84 ಚಕಿಮೀ ನಿರ್ಧಾರವನ್ನು ಬದಲಿಸುವ ಅವಶ್ಯಕತೆಯಿಲ್ಲ ಎಂದು ತಿಳಿಸಿತ್ತು.
2020ರ ಜನವರಿಯಲ್ಲಿ ಇಎಸ್ಜಡ್ ಕುರಿತು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ರಾಷ್ಟ್ರೀಯ ಉದ್ಯಾನದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ (ಬಫರ್ ವಲಯ) ಯಾವುದೇ ವಾಣಿಜ್ಯ ಚಟುವಟಿಕೆ ಕೈಗೊಳ್ಳುವಂತಿಲ್ಲ ಎಂದು ತಿಳಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಕೇಂದ್ರಕ್ಕೆ ಪತ್ರ ಬರೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ರಾಜ್ಯ ಸರ್ಕಾರದ ಪ್ರಸ್ತಾಪದಂತೆಯೇ ಅಂತಿಮ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ಅದರಂತೆಯೇ ಇದೀಗ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆಯನ್ನು ಮಾ.11ಕ್ಕೆ ಪ್ರಕಟಿಸಿದ್ದು, ‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಗಡಿಯಿಂದ 100 ಮೀ.ನಿಂದ 1 ಕಿ.ಮೀ. ದೂರದವರೆಗೆ ಒಟ್ಟಾರೆ 168.84 ಚ.ಕಿ.ಮೀ ಪ್ರದೇಶವನ್ನು ಇಎಸ್ಜಡ್ ಎಂದು ಘೋಷಿಸಿದೆ. ಕರಡು ಅಧಿಸೂಚನೆಗೆ ಬರೋಬ್ಬರಿ 100 ಚ.ಕಿ.ಮೀ. ವಿಸ್ತಾರವನ್ನು ಕುಗ್ಗಿಸಿದೆ.
ಹೇಳಿದ್ದೊಂದು, ಮಾಡಿದ್ದೊಂದು: ಬನ್ನೇರುಘಟ್ಟವು ಆನೆಗಳ ಸಂತಾನೋತ್ಪತ್ತಿ ತಾಣವಾಗಿದ್ದು, ಚಿರತೆ, ಕಾಡು ನಾಯಿ, ಗೌರ್, ಸಾಂಬಾರ್ ಸೇರಿ ಅನೇಕ ಪ್ರಾಣಿ ಗಳನ್ನು ಹೊಂದಿದೆ. ವಿರಳ ಹಾಗೂ ಅಪಾಯದ ಅಂಚಿನಲ್ಲಿರುವ ಅನೇಕ ಸಸ್ಯ ಪ್ರಬೇಧಗಳು, ಪ್ರಾಣಿಗಳು, ಸಸ್ತನಿಗಳು, ಪಕ್ಷಿ ಗಳೂ ಇವೆ. ಉದ್ಯಾನವು ಅರ್ಕಾವತಿ, ಸುವರ್ಣಮುಖಿ, ಮುತ್ಯಾಲ ಮಡುವು ಹೊಳೆ, ಹೆಬ್ಬಾಲಹಳ್ಳ, ಅಂತರಗಂಗೆ ಸೇರಿದಂತೆ ಕಾವೇರಿಗೆ ಸೇರುವ ನದಿ ಮೂಲಗಳ ಜಲಾನಯನ ಪ್ರದೇಶ ವಾಗಿದೆ. ಇದೆಲ್ಲವನ್ನೂ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಆರಂಭದಲ್ಲೇ ತಿಳಿಸಿ, ಉದ್ಯಾನವು ಎಷ್ಟು ಸೂಕ್ಷ್ಮ ಪ್ರದೇಶ ಎಂದು ಕೊಂಡಾಡಿದೆ. ಆದರೆ ಅಂತಿಮವಾಗಿ ಭೂ ಮಾಫಿಯಾ ಹಾಗೂ ಗಣಿ ಮಾಫಿಯಾಕ್ಕೆ ಮಣಿದಿದೆ. ಪರಿಸರ ಕಾರ್ಯಕರ್ತರ ನಿಯೋಗದಲ್ಲಿ ಈ ಹಿಂದೆ ತೆರಳಿದ್ದ ಬಿಜೆಪಿ ಸಂಸದರು, ಮೂಲ ಪ್ರಸ್ತಾವನೆಯನ್ನೇ ಉಳಿಸಿಕೊಳ್ಳಲು ಬೆಂಬಲ ಸೂಚಿಸಿದ್ದರು. ಆದರೆ ಇದೀಗ ಅದೇ ಪಕ್ಷದ ಸರ್ಕಾರ ವ್ಯಾಪ್ತಿಯನ್ನು ತಗ್ಗಿಸಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರ ಯಾವುದೇ ವೈಜ್ಞಾನಿಕ ಸತ್ಯವನ್ನು ಪರಿಗಣಿಸದೆ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದೆ ಎಂದು ವೈಲ್ಡ್ಲೈಫ್ ಫರ್ಸ್ಟ್ ಟ್ರಸ್ಟಿ ಪ್ರವೀಣ್ ಭಾರ್ಗವ್ ತಿಳಿಸಿದ್ದಾರೆ. ಅಧಿಸೂಚನೆ ಪ್ರಕಟಿಸುವ ಎರಡು ದಿನ ಮೊದಲು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಸಂಸದ ರಾಜೀವ್ ಚಂದ್ರಶೇಖರ್, ಸೂಕ್ಷ್ಮ ವಲಯವನ್ನು ತಗ್ಗಿಸಬಾರದು ಎಂದು ತಿಳಿಸಿದ್ದರು.
ಗಣಿ ಮತ್ತು ರಿಯಲ್ಎಸ್ಟೇಟ್ ಲಾಬಿಗೆ ಸರ್ಕಾರ ಮಣಿದಿದೆ. ಈ ಸರ್ಕಾರ ಬಂದರೆ ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. | ವಿಜಯ್ ನಿಶಾಂಕ್ ಪರಿಸರ ತಜ್ಞ ಕರ್ನಾಟಕ ಅರಣ್ಯ ಸಚಿವರ ಆಶ್ವಾಸನೆಯ ಹೊರತಾಗಿಯೂ ಈ ಅಧಿಸೂಚನೆ ಬಂದಿರುವುದು ದುರದೃಷ್ಟಕರ. ಸತ್ಯಾಂಶವನ್ನು ಪರಿಗಣಿಸಲು ಮತ್ತು ಬೆಂಗಳೂರು ನಗರ ಮತ್ತು ಜನರ ಹಿತದೃಷ್ಟಿಯಿಂದ ಅಧಿಸೂಚನೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸಲಾಗುತ್ತದೆ. | ಹರೀಶ್ ಕುಮಾರ್ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ https://www.vijayavani.net/sexual-harassment-on-lady/ https://www.vijayavani.net/confidence-is-the-key-to-victory/