ಬನ್ನೇರುಘಟ್ಟಕ್ಕೆ ಹೊಸ ಅತಿಥಿಗಳ ಆಗಮನ

karadi
ಬನ್ನೇರುಘಟ್ಟಕ್ಕೆ ಹೊಸ ಅತಿಥಿಗಳ ಆಗಮನ
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿವಿಧ ಪ್ರಾಣಿಗಳು ಮರಿಗಳಿಗೆ ಜನ್ಮ ನೀಡಿದ್ದು, ಅಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಸಂತಸ ಉಣಬಡಿಸುತ್ತಿವೆ.
ತಿಂಗಳ ಅವಧಿಯಲ್ಲಿ ಉದ್ಯಾನವನದಲ್ಲಿನ ನರಿಯೊಂದು 3 ಮರಿಗಳಿಗೆ, ತೋಳ 4 ಮರಿಗಳಿಗೆ ಜನ್ಮನೀಡಿವೆ. ಎರಡು ನೀಲಗಾಯ್ಗಳು ಅವಳಿ ಮರಿಗಳಿಗೆ ಜನ್ಮವಿತ್ತಿವೆ. ಸಫಾರಿ ಆವರಣದಲ್ಲಿರುವ ಕಾಡೆಮ್ಮೆಯೂ ಕರು ಹಾಕಿದ್ದು, ಪುಟಾಣಿ ವನ್ಯಜೀವಿಗಳ ತುಂಟಾಟ ನೋಡುಗರನ್ನು ಸೆಳೆಯುತ್ತಿದೆ. ತಾಯಿಯ ಜತೆಗೆ ನಾಲ್ಕು ಮರಿಗಳನ್ನು ಒಂದೇ ಸ್ಥಳದಲ್ಲಿ ಬಿಟ್ಟು ಪ್ರಾಣಿ ಪಾಲಕರು ಆರೈಕೆ ಮಾಡುತ್ತಿದ್ದಾರೆ. ತೋಳ ಹಾಗೂ ನರಿ ಬಿಲವನ್ನು ಮಾಡಿಕೊಂಡು ಮರಿಗಳನ್ನು ನೋಡಿಕೊಳ್ಳುತ್ತಿದ್ದು, ಜನಸಂದಣಿ ಕಡಿಮೆಯಿದ್ದಾಗ ಮರಿಗಳು ಬಿಲದಿಂದ ಹೊರಬಂದು ಆಟವಾಡುತ್ತವೆ.
ಸಿಬ್ಬಂದಿ ಮುತುವರ್ಜಿ: ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆ ಮರಿಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಿದೆ. ತೋಳ ಹಾಗೂ ನರಿ ಮರಿಗಳ ಬಗ್ಗೆ ಜಾಗ್ರತೆವಹಿಸಿರುವ ಸಿಬ್ಬಂದಿ, ಅವುಗಳಿಗೆ ಬೇಕಾದ ಆಹಾರ ಹಾಗೂ ಹಣ್ಣು- ತರಕಾರಿಗಳನ್ನು ನಿಯಮಿತವಾಗಿ ನೀಡುತ್ತಿದ್ದಾರೆ. ಸಫಾರಿ ರಸ್ತೆ ಆವರಣದಲ್ಲಿರುವ ಕಾಡೆಮ್ಮೆ ಕರು ಗಂಡೋ- ಹೆಣ್ಣೋ ಎಂಬುದಿನ್ನೂ ದೃಢವಾಗಿಲ್ಲ. ಕಾಡೆಮ್ಮೆ ತನ್ನ ಕರುವಿನ ಬಳಿ ಯಾರನ್ನೂ ಬಿಡುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಸದ್ಯಕ್ಕೆ ಅದರ ಆರೈಕೆಗೆ ಹೆಚ್ಚು ಗಮನಹರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net