

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆಯಾದ ಬೆನ್ನಲ್ಲೇ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಬಿಜೆಪಿ ನಡೆ ಖಂಡನೀಯ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು ಪ್ರಚಾರಕ್ಕಾಗಿ ಬ್ಯಾನರ್‌ಗಳನ್ನು ಅಳವಡಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಧಾರವಾಡ 71ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆಯ ಹಿಂದೆ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ ಹಾಗೂ ಎನ್.ಎಚ್. ಕೋನರಡ್ಡಿ ಅವರ ನಿರಂತರ ಪ್ರಯತ್ನವಿದೆ. ಇವರ ಒತ್ತಡದಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ಧಾರವಾಡ ಜನತೆಯ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು.
ಮತ್ತೊ0ದೆಡೆ ಸಚಿವ ಜೋಶಿ ಹಾಗೂ ಶಾಸಕ ಬೆಲ್ಲದ ಅವರು ಕ್ರೆಡಿಟ್ ಪೊಲಿಟಿಕ್ಸ್ ಮಾಡುತ್ತಿದ್ದಾರೆ. ಈ ಹಿಂದೆ ಅವರದೆ ಸರ್ಕಾರ ಇದ್ದಾಗ ಪ್ರತ್ಯೇಕ ಪಾಲಿಕೆ ಘೋಷಿಸದೆ, ಕಾಂಗ್ರೆಸ್ ಸರ್ಕಾರದ ಆದೇಶವನ್ನು ನಾವು ಮಾಡಿದ್ದೇವೆ ಎಂದು ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಎನ್ನುತ್ತಿದ್ದವರು ಪ್ರತ್ಯೇಕ ಪಾಲಿಕೆ ಹೋರಾಟಗಾರರು ಭೇಟಿಯಾದಾಗ ಸೌಜನ್ಯಕ್ಕೂ ಪ್ರಯತ್ನಿಸದೆ ಹಾರಿಕೆ ಉತ್ತರ ನೀಡಿದರು. `ಕೊಟ್ಟ ಕುದುರೆ ಏರದವರು ವೀರರೂ ಅಲ್ಲ ಶೂರರೂ ಅಲ್ಲ' ಎಂದು ಇಂಥವರನ್ನೇ ನೋಡಿಯೇ ಹಿರಿಯರು ಹೇಳಿರಬೇಕು. ನೈತಿಕತೆ ಇದ್ದರೆ ಕೂಡಲೇ ಬ್ಯಾನರ್‌ಗಳನ್ನು ತೆಗೆಸಿ ಸರ್ಕಾರಕ್ಕೆ ಅಭಿನಂದನೆ ತಿಳಿಸಬೇಕು ಎಂದರು.
ಪಾಲಿಕೆ ಪ್ರತಿಪಕ್ಷ ನಾಯಕ ರಾಜಶೇಖರ, ಕವಿತಾ ಕಬ್ಬೇರ, ರವಿ ಮಾಳಿಗೇರ, ವೀರಣ್ಣ ಶೆಟ್ಟರ್, ಸೂರವ್ವ ಪಾಟೀಲ, ಸುದ್ದಿಗೋಷ್ಠಿಯಲ್ಲಿದ್ದರು.