

ಚನ್ನರಾಯಪಟ್ಟಣ: ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ನಿಷೇಧಿತ ಮೈಕ್ರೋ ಪ್ಲಾಸ್ಟಿಕ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಳಿಗೆಗಳು ಹಾಗೂ ಗೋದಾಮಿನ ಮೇಲೆ ದಿಢೀರ್ ದಾಳಿ ನಡೆಸಿದ ಪುರಸಭಾಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳ ನೇತೃತ್ವ ತಂಡ ಮಂಗಳವಾರ 2 ಲಕ್ಷ ರೂ. ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು 8,500 ರೂ. ದಂಡ ವಿಧಿಸಿದೆ.
ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಮಾತನಾಡಿ, ನಿಷೇಧ ಇರುವ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಅನ್ನು ಚಿಲ್ಲರೆ ಅಂಗಡಿ ಮಾಲೀಕರಿಗೆ ಮಾರಾಟ ಮಾಡಲು ಸಂಗ್ರಹಿಸಿದ್ದ ಪಟ್ಟಣದ ಸೂರ್ಯ ಎಂಟರ್‌ಪ್ರೈಸಸ್ ಹಾಗೂ ರಾಮದೇವ್ ಎಂಟರ್‌ಪ್ರೈಸಸ್‌ನಲ್ಲಿ ಗೋದಾಮುಗಳಿಗೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಸರ್ಕಾರ ನಿಷೇಧ ಮಾಡಿರುವ ಪ್ಲಾಸ್ಟಿಕ್ ಅನ್ನು ಮಾರಾಟ ಮಾಡುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದರೂ ಪದೇಪದೆ ಬಳಸಲಾಗುತ್ತಿದೆ ಎಂದರು.
ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ತಟ್ಟೆಗಳನ್ನು ಬಳಕೆ ಮಾಡಿದಲ್ಲಿ ಪರಿಸರ ಕಾಯ್ದೆ ಅನ್ವಯ ದೂರು ದಾಖಲಿಸಲಾಗುತ್ತದೆ. ನಗರವು ಪ್ಲಾಸ್ಟಿಕ್‌ಮುಕ್ತ ಆಗುವವರೆಗೆ ಪ್ರತಿ ದಿನವೂ ನಗರದ ವಿವಿಧೆಡೆ ಸಂಚರಿಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಪುರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮನೆ, ಮದುವೆ ಹಾಲ್, ಸಮಾರಂಭ ಮಾಡುವಾಗ ಹಾಗೂ ರಸ್ತೆಬದಿ ಟೀ, ಕಾಫಿ, ತಿಂಡಿ ಮಾರಾಟ ಮಾಡುವವರು ಮರುಬಳಕೆಯ ವಸ್ತುಗಳಾದ ಸ್ಟೀಲ್ ಲೋಟ, ಸ್ಟೀಲ್ ತಟ್ಟೆಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್ ಮಾತನಾಡಿ, ಉದ್ದಿಮೆದಾರರು, ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಉಪಯೋಗಿಸುವುದು ಕಂಡುಬಂದಲ್ಲಿ ಪರವಾನಗಿ ರದ್ದುಪಡಿಸುವುದರೊಂದಿಗೆ ದೊಡ್ಡ ಮೊತ್ತದ ದಂಡ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಪರಿಸರ ಇಂಜಿನಿಯರ್ ಕಾವ್ಯಶ್ರೀ ಮಾತುನಾಡಿ, ಬೆಳಗ್ಗೆಯಿಂದ ಪ್ರಾರಂಭವಾದ ದಾಳಿಯಲ್ಲಿ 2 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ವಶಕ್ಕೆ ತೆಗೆದುಕೊಂಡು ನಲ್ಲೂರು ಬಳಿಯ ನೆಲಭರ್ತಿ ಜಾಗಕ್ಕೆ ಸಾಗಿಸಿದರು ಎಂದರು.
ಪುರಸಭೆ ಉಪಾಧ್ಯಕ್ಷೆ ಕವಿತಾರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ಆರೋಗ್ಯ ನಿರೀಕ್ಷಕ ಮಂಜುನಾಥ್, ಪುರಸಭೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.