ಯುವಜನರನ್ನು ಅಧ್ಯಾತ್ಮ ಪಥಕ್ಕೆ ಸೆಳೆದ ಹೆಗ್ಗಳಿಕೆ

udp-3-bannanje 1
Published on

ಉಡುಪಿ: ಸಂಪ್ರದಾಯಗಳ ಬಗ್ಗೆ ನಂಬಿಕೆ ಹೊಂದಿಲ್ಲದ ಈ ತಲೆಮಾರಿನ ಅನೇಕ ಯುವಜನರನ್ನು ಅಧ್ಯಾತ್ಮದ ಪಥಕ್ಕೆ ಕರೆದುಕೊಂಡು ಹೆಗ್ಗಳಿಕೆ ಬನ್ನಂಜೆ ಗೋವಿಂದಾಚಾರ್ಯರದ್ದಾಗಿದೆ. ಇದಕ್ಕಾಗಿ ಅವರು ಬಹುವಾಗಿ ಶ್ರಮಿಸಿದ್ದರು ಎಂದು ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದ ಹೇಳಿದರು.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ವಿದ್ಯಾವಾಚಸ್ಪತಿ, ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ 90ನೇ ವರ್ಷಾಚರಣೆ ಅಂಗವಾಗಿ ಬನ್ನಂಜೆ ಗೋವಿಂದ ಆಚಾರ್ಯ ಪ್ರತಿಷ್ಠಾನ ಸಹಯೋಗದಲ್ಲಿ ಬನ್ನಂಜೆ&90 ಉಡುಪಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಲ್ಯದಿಂದಲೂ ಸ್ವತಂತ್ರ ಚಿಂತನೆಯಲ್ಲಿ ಬೆಳೆದ ಬನ್ನಂಜೆಯವರು, ಸ್ವಾಧ್ಯಾಯದ ಮೂಲಕ ಪಂಡಿತ್ಯವನ್ನು ಗಳಿಸಿದ್ದರು. ಮಧ್ವಾಚಾರ್ಯರ ಸರ್ವಮೂಲ ಗ್ರಂಥ ಸಂಪಾದನೆ ಅವರ ಬದುಕಿನ ಸಾಧನೆಗಳಿಗೆ ಕಿರೀಟಪ್ರಾಯವಾಗಿದೆ. ಸಂಸತದಲ್ಲಿದ್ದ ಅಪಾರ ಜ್ಞಾನಭಂಡಾರವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಬನ್ನಂಜೆಯವರಿಗೆ ಸಲ್ಲುತ್ತದೆ ಎಂದರು.

ಸೈದ್ಧಾಂತಿಕವಾಗಿ ಭಿನ್ನ ಅಭಿಪ್ರಾಯಕ್ಕೂ ಬೆಲೆ ನೀಡುವ ವಿಶಾಲ ಮನೋಭಾವ ಹಿಂದೂಧರ್ಮದಲ್ಲಿ ಮಾತ್ರ ಕಾಣಲು ಸಾಧ್ಯ. ಪ್ರತಿಯೊಬ್ಬರ ಬದುಕಿನಲ್ಲೂ ಭವಿಷ್ಯ ನಿರ್ಧರಿತವಾಗಿರುತ್ತದೆ. ನಾವು ನಿಮಿತ್ತಮಾತ್ರವಾಗಿದ್ದು, ಕೆಲವೊಮ್ಮೆ ಭಿನ್ನ ದಾರಿಯಲ್ಲಿದ್ದರೂ ಮೂಲಕ್ಕೆ ಆತನೇ ಕರೆದುಕೊಂಡು ಬರುತ್ತಾನೆ ಎಂಬುದಕ್ಕೆ ಬನ್ನಂಜೆ ಉದಾಹರಣೆ. ನಮಗೆಲ್ಲಾ ಶಾಸ್ತ್ರಗಳ ಸತ್ಯದರ್ಶನ ಮಾಡಿಸಿರುವುದರಿಂದ ಬನ್ನಂಜೆಯವರು ದಾರ್ಶನಿಕರಾಗಿದ್ದಾರೆ. ಯಾವುದೇ ಪೂರ್ವಾಗ್ರಹ ಅಥವಾ ದುರಾಗ್ರಹಗಳಿಲ್ಲದೆ ತತ್ವವನ್ನು ತಿಳಿಸಿಕೊಟ್ಟವರು ಎಂದು ಶ್ಲಾಘಿಸಿದರು.

ತರಂಗದ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಹರೀಶ್ಚಂದ್ರ, ಸಂಸತ ವಿವಿ ನಿವೃತ್ತ ಉಪಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್​, ಸಂಸತಿ ವಿಶ್ವ ಪ್ರತಿಷ್ಠಾನ ಅಧ್ಯಕ್ಷ ವಿಶ್ವನಾಥ ಶೆಣೈ, ಎಂಜಿಎಂ ಪ್ರಾಂಶುಪಾಲೆ ವನಿತಾ ಮಯ್ಯ, ನಾಡೋಜ ಕೆ.ಪಿ.ರಾವ್​, ಶಾಸಕ ಯಶ್ಪಾಲ್​ ಸುವರ್ಣ, ಮಾಜಿ ಶಾಸಕ ರುಪತಿ ಭಟ್​, ಹಿರಿಯ ಲೇಖಕಿ ವೀಣಾ ಬನ್ನಂಜೆ ಉಪಸ್ಥಿತರಿದ್ದರು. ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೊ ಮೋಹನ್​ ಸ್ವಾಗತಿಸಿ, ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನಕೊಡವೂರು ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬನ್ನಂಜೆಯವರು ಕಲಿತ ಆದಿಉಡುಪಿ ಶಾಲೆಯಿಂದ ಎಂಜಿಎಂ ಕಾಲೇಜಿನವರಿಗೆ ಮೆರವಣಿಗೆ ನಡೆಯಿತು.

ಸಮಾರೋಪ ಸಮಾರಂಭ

ಸಾಯಂಕಾಲ ಹಿರಿಯ ಗಾಯಕ ವಿದ್ಯಾಭೂಷಣ ಸಭಾಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್​ ಸಮಾರೋಪ ಭಾಷಣ ಮಾಡಿದರು. ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರಮುಖರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ನಾರಾಯಣ ಮಡಿ, ಉಷಾ ಚಡಗ, ಬಸವರಾಜ ಮಾಮನಿ, ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು. ಮುರಳಿ ಕಡೆಕಾರ್​ ಸ್ವಾಗತಿಸಿದರು, ವೀಣಾ ಬನ್ನಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವಿದ್ಯಾಭೂಷಣರಿಂದ ಬನ್ನಂಜೆ ಆಚಾರ್ಯರ ಹಾಡುಗಳ ಹಾಡು ನಾದ ಲಹರಿ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net