

ವಿಜಯವಾಣಿ ಸುದ್ದಿಜಾಲ ಉಡುಪಿ
ಶ್ರೀಕಷ್ಣನ ಜನ್ಮಾಷ್ಟಮಿ ನಿಮಿತ್ತ ಉಡುಪಿಯಲ್ಲಿ ಮಂಡಲೋತ್ಸವ ನಡೆಯುವ ಸಂದರ್ಭದಲ್ಲಿಯೇ ಶ್ರೀಕೃಷ್ಣನ ಭಕ್ತರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣ. ಅವರ ವಿದ್ವತ್ತು, ಸ್ಫೂರ್ತಿ ಹಾಗೂ ಪ್ರೇರಣೆ ಇನ್ನೂ ಎಲ್ಲೆಡೆ ಜಾಗೃತವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಗೀತಾ ಮಂದಿರದಲ್ಲಿ ಜುಲೈ 13ರಂದು ಸಾಯಂಕಾಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ ಅಭಿಮಾನಿಗಳ ವತಿಯಿಂದ ಆ.3ರಂದು ಎಂಜಿಎಂ ಕಾಲೇಜಿನ ಮುದ್ದಣ ಪಂಟಪದಲ್ಲಿ ಆಯೋಜಿಸಿರುವ ಬನ್ನಂಜೆ-90 ಉಡುಪಿ ನಮನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ವತ್ಪೂರ್ಣ ಪ್ರವಚನದಿಂದಲೇ ಖ್ಯಾತರಾಗಿದ್ದ ಪದ್ಮಶ್ರೀ ಬನ್ನಂಜೆಯವರು ನಮ್ಮೊಂದಿಗೆ ಇರುತ್ತಿದ್ದರೆ 90 ವರ್ಷವಾಗಿರುತ್ತಿತ್ತು. ಅವರ ಅಭಿಮಾನಿಗಳೆಲ್ಲ ಸೇರಿ ಸಂಸ್ಮರಣೆ ಮಾಡುತ್ತಿರುವುದು ಅನುಕರಣೀಯ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲಿ ಎಂದು ಸುಗುಣೇಂದ್ರ ಶ್ರೀ ಶುಭ ಹಾರೈಸಿದರು.