

ಪಾಂಡವಪುರ: ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಬನ್ನಮ್ಮದೇವಿ ಜಾತ್ರಾ ಮಹೋತ್ಸವ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಏ.14 ರಿಂದ 16ವರೆಗೆ ನಡೆದ ಜಾತ್ರಮಹೋತ್ಸವದ ಕಾರ್ಯಕ್ರಮದಲ್ಲಿ ಮೊದಲನೇ ದಿನವಾದ ಶುಕ್ರವಾರ ರಾತ್ರಿ ಪೂಜಾ ಕುಣಿತ, ಡೊಳ್ಳು ಕುಣಿತ, ವೀರ ಮಕ್ಕಳ ಕುಣಿತ, ವೀರಗಾಸೆ, ಕೋಲಾಟ ಮತ್ತು ಮಂಗಳಕರ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬನ್ನಮ್ಮ ದೇವಿಯ ಘಟ್ಟೆ ಉತ್ಸವ ನಡೆಯಿತು. ಮಾರನೇ ದಿನ ಶನಿವಾರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಓಕುಳಿಯಲ್ಲಿ ಗ್ರಾಮದ ನೂರಾರು ಯುವಕರು ಪಾಲ್ಗೊಂಡು ಓಕುಳಿ ಆಡಿದರು. ಅಂದು ಸಂಜೆ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಅಂತಿಮ ದಿನವಾದ ಭಾನುವಾರ ಊರ ಹೊರಗಿನ ಬನ್ನಮ್ಮ ದೇವಿಯ ದೇವಸ್ಥಾನದಿಂದ ಗ್ರಾಮದವರೆಗೂ ಚಪ್ಪರದ ರಥದಲ್ಲಿ ವೀರಾಜಮಾನಳಾದ ದೇವಿಯನ್ನು ಗ್ರಾಮಕ್ಕೆ ಕರೆತಂದು, ಗ್ರಾಮದಲ್ಲಿ ದೇವಿಯ ದ್ವಾರಪಾಲಕರಾದ ಮೂಕು ಮಾಕಮ್ಮ ದೇವಿಗೆ ಕುರಿಯನ್ನು ಬಲಿ ಕೊಡುವ ಮೂಲಕ ಭಕ್ತರು ಧೂಳುಮರಿ ಸೇವೆ ಸಲ್ಲಿಸಿದರು. ಬಳಿಕ ಪಕ್ಕದ ಗ್ರಾಮವಾದ ಕಟ್ಟೇರಿಯ ಏಳೂರಮ್ಮ ದೇವಸ್ಥಾನದವರೆಗೆ ಮಹಿಳೆಯರು ಕಾಲ್ನಡಿಗೆಯಲ್ಲಿ ತೆರಳಿ ತಂಬಿಟ್ಟಿನ ಆರತಿ ಸೇವೆ ಸಲ್ಲಿಸಿ ಗ್ರಾಮಕ್ಕೆ ವಾಪಸ್ಸಾದರು. ರಾತ್ರಿ ಗ್ರಾಮದ ಯುವಕರು ಚಕ್ರವ್ಯೆಹ ಅಥವಾ ಕಾಲಚಕ್ರ ಎಂಬ ಸಾಮಾಜಿಕ ನಾಟಕ ಪ್ರರ್ಶಿಶಿದರು. ಅಂತಿಮ ದಿನ ಗ್ರಾಮಸ್ಥರೆಲ್ಲರಿಗೂ ಬಾಡೂಟ ಆಯೋಜಿಸಲಾಗಿತು.
ದೇವಿಯ ಉತ್ಸವಕ್ಕಾಗಿ ಇಡೀ ಗ್ರಾಮವನ್ನು ತಳಿರು ತೋರಣಗಳು ಮತ್ತು ವಿದ್ಯುತ್ ದೀಪಾಲಂಕರಗಳಿಂದ ಸಿಂಗರಿಸಲಾಗಿತು. ಮಹಿಳೆಯರು ತಮ್ಮ ಮನೆಯ ಮುಂದೆ ಹಾಗೂ ದೇವಿಯ ಉತ್ಸವ ಸಂಚರಸಿವ ರಸ್ತೆಗಳಲ್ಲಿ ಚಿತ್ತಾರದ ರಂಗೋಲಿಗಳನ್ನು ಬಿಡಿಸಿದರು. ಹಬ್ಬ ಮತ್ತು ಉತ್ಸವದ ಜವಾಬ್ದಾರಿಯನ್ನು ಗ್ರಾಮದ ಅಡ್ಡ ಬಾಯ್ಸ ಯುವಕರ ತಂಡ ನಿಭಾಯಿಸಿತು. ಯುವಕರಿಗೆ ಗ್ರಾಮದ ಯಜಮಾನರುಗಳಾದ ಕೆ.ಯೋಗೇಂದ್ರ, ಕೆಂಪೂಗೌಡ, ಎನ್.ಶ್ರೀನಿವಾಸೇಗೌಡ, ಮರಿದೇವೇಗೌಡ, ಸಿದ್ದೇಗೌಡ, ಚಂದ್ರೇಗೌಡ, ಮಾಕೇಗೌಡ, ನಾಗರಾಜು, ಗುಡ್ಡಪ್ಪ ಕುಮಾರ್, ಡಿ.ಸೋಮೇಗೌಡ, ದೀಪು, ಪರಮೇಶ್ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಸಹಕಾರ ನೀಡಿದರು.