

ಉಡುಪಿ: ಯುವವಾಹಿನಿ ಉಡುಪಿ ಘಟಕದ ವತಿಯಿಂದ ನೀಡಲಾಗುವ "ಬನ್ನಂಜೆ ಬಾಬು ಆಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಗೆ ನಿವೃತ್ತ ಪ್ರಾಂಶುಪಾಲ ಕನರಾಡಿ ವಾದಿರಾಜ್ ಭಟ್ ಹಾಗು ಜಾನಪದ ಕಲಾವಿದ ಪ್ರಶಸ್ತಿಗೆ ಹಿರಿಯ ಬೈದೇರು ದರ್ಶನ ಪಾತ್ರಿ ಸೂಡ ಕೋಟಿ ಪೂಜಾರಿ ಆಯ್ಕೆಯಾಗಿದ್ದು, ಮಾ.3 ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ಚಿಟ್ಪಾಡಿ ಲಕ್ಷಿ$್ಮ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಂಚಾಲಕ ಭಾಸ್ಕರ್ ಸುವರ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾಹಿತಿ ಮುದ್ದು ಮೂಡುಬೆಳ್ಳೆ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸಾಧಕರನ್ನು ಗುರುತಿಸಿದೆ. ಈ ಬಾರಿ ಸಮಾಜ ಸೇವಕ ಈಶ್ವರ ಮಲ್ಪೆ ಅವರಿಗೆ ವಿಶೇಷ ಗೌರವ ನೀಡಲಾಗುವುದು. ಮುಕ್ಕದ ಶ್ರೀನಿವಾಸ್ ಕಾಲೇಜಿನ ಪ್ರಾಧ್ಯಾಪಕ ಎಂ.ಎಸ್. ಕೋಟ್ಯಾನ್ ಪ್ರದಾನ ಮಾಡಲಿದ್ದಾರೆ. ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕೇಶ್ ಕೋಟ್ಯಾನ್ ಭಾಗವಹಿಸಲಿದ್ದಾರೆ.
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷೆ ಅಮಿತಾಂಜಲಿ ಕಿರಣ್, ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಆಮೀನ್, ಯುವವಾಹಿನಿ ಉಡುಪಿ ಘಟಕದ ಮಾಜಿ ಅಧ್ಯಕ್ಷ ರಘುನಾಥ್ ಮಾಬಿಯಾನ್ ಉಪಸ್ಥಿತರಿದ್ದರು.