ಬಣ್ಣಗಳ ಭಾವಲೋಕ ಸೃಜನಶೀಲ ಪರಿಕಲ್ಪನೆ ಕಾರ್ಯಕ್ರಮ ಉದ್ಘಾಟಿಸಿ ವಿದುಷಿ ವಸುಂಧರಾ ದೊರೆಸ್ವಾಮಿ ಅಭಿಮತ

mng--23 may Nada nruthya
Published on

ಮಂಗಳೂರು : ತನ್ನ ಶಿಷ್ಯೆ ಬಣ್ಣಗಳ ಭಾವಲೋಕ ಹೊಸ ಪರಿಕಲ್ಪನೆಯಲ್ಲಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಿರುವುದು ಗುರುವಾಗಿ ಅತ್ಯಂತ ಸಂತೋಷ ಉಂಟು ಮಾಡಿದೆ ಎಂದು ವಿದುಷಿ ವಸುಂಧರಾ ದೊರೆಸ್ವಾಮಿ ಹೇಳಿದರು.


ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ ಇತ್ತೀಚೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿದ ಬಣ್ಣಗಳ ಭಾವಲೋಕ ಭಾರತನಾಟ್ಯ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.


ನಾದ ನೃತ್ಯ ಕೇಂದ್ರವನ್ನು ನಡೆಸಿಕೊಂಡು ಬಂದಿರುವ ನನ್ನ ಶಿಷ್ಯೆ ಭ್ರಮರಿ ಶಿವಪ್ರಕಾಶ್, ತಾನು ನೃತ್ಯ ಪ್ರದರ್ಶಿಸುವುದಲ್ಲದೆ ತನ್ನ ಶಿಷ್ಯೆಯರಿಗೆ ಆ ವಿದ್ಯೆಯನ್ನು ಧಾರೆಯೆರೆದು ಇಂದು ಆ ಮಕ್ಕಳ ಜೊತೆಯಲ್ಲಿ ನೃತ್ಯ ಕಾರ್ಯಕ್ರಮ ನೀಡುತಿದ್ದಾರೆ. ಗುರುವಾಗಿ ನನಗೆ ಇಂದು ಶಿಷ್ಯೆಯನ್ನು ಪ್ರಶಿಷ್ಯೆಯರ ಜೊತೆ ನೋಡುವ ಸಂಭ್ರಮ ಎಂದರು.


ಕರ್ನಾಟಕ ಕರಾವಳಿ ನೃತ್ಯ ಪರಿಷತ್ ಇದರ ಅಧ್ಯಕ್ಷ ವಿದ್ವಾನ್ ಯು. ಕೆ. ಪ್ರವೀಣ್ ಅತಿಥಿಯಾಗಿದ್ದರು. ಭ್ರಮರಿಯವರ ಅಧ್ಭುತವಾದ ನೃತ್ಯ ಸಂಯೋಜನೆ ಶ್ಲಾಘನೀಯ. ಬಣ್ಣದ ಭಾವಲೋಕ ಎಂಬ ಹೆಸರನ್ನು ಕಾರ್ಯಕ್ರಮಕ್ಕೆ ಇಟ್ಟಂತೆ ಪ್ರೇಕ್ಷಕರನ್ನು ಹಿಡಿದಿಟ್ಟು ಭಾವ ಲೋಕಕ್ಕೆ ಕೊಂಡೊಯ್ದ ಭಾವನಾತ್ಮಕವಾದ ಈ ಕಾರ್ಯಕ್ರಮ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಅಧ್ಭುತವಾದ ಹೊಸ ಪರಿಕಲ್ಪನೆಯ ಬಣ್ಣದ ಭಾವಲೋಕ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಹೊಸತನ್ನು ಬಯಸುವ ಜನರ ನಿರೀಕ್ಷೆ ಸುಳ್ಳಾಗಲಿಲ್ಲ ಎಂದರು.


ನೃತ್ಯ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಏಕವ್ಯಕ್ತಿ ಪ್ರದರ್ಶನದಲ್ಲಿ ಪ್ರಣಯಿನಿಯಾದ ಹಿಡಿಂಬೆಯ ಮನೋ ಪ್ರಪಂಚದ ಅಭಿವ್ಯಕ್ತಗೊಂಡರೆ, ದ್ವಿಗುಳ ನೃತ್ಯ ಪ್ರದರ್ಶನದಲ್ಲಿ ನಾಯಕಿಯಾದ ಗೋಪಿಕೆಯು ಶ್ರೀ ಕೃಷ್ಣರಾಯನ ಬರವನ್ನೇ ಎದುರು ನೋಡುತ್ತ ತನ್ನ ಸಖಿಯ ಮೂಲಕ ಶ್ರೀ ಕೃಷ್ಣನನ್ನು ತನ್ನೆಡೆಗೆ ಕರೆಸಿಕೊಳ್ಳುವ ನೃತ್ಯವನ್ನು ಪ್ರಸ್ತುತಪಡಿಸಿ, ಅಂತಿಮವಾಗಿ ಮೀನಾಕ್ಷಿ ಕಲ್ಯಾಣ ನೃತ್ಯ ನಾಟಕದ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ಕಲಾವಿದರಿಗೆ ನಟುವಾಂಗದಲ್ಲಿ ಡಾ. ವಸುಂದರಾ ದೊರೆಸ್ವಾಮಿ, ಹಾಡುಗಾರಿಕೆಯಲ್ಲಿ ಶ್ರೀರಕ್ಷಾ, ಮೃದಂಗದಲ್ಲಿ ವಿದ್ವಾನ್ ವಿ. ಕೆ. ಹೆಚ್. ರವಿಕುಮಾರ್, ವಯಲಿನ್ ನಲ್ಲಿ ವಿ. ಗಣರಾಜ ಕಾರ್ಲೆ ಹಾಗೂ ಕೊಳಲಿನಲ್ಲಿ ವಿ. ಕೃಷ್ಣ ಪವನ್ ಕುಮಾರ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net