ಸಾಧನೆ ಲೋಪ, ಬಿವೈಆರ್ ಆಕ್ಷೇಪ

12 smg 2
Published on

ಶಿವಮೊಗ್ಗ: ಕೆಲ ಬ್ಯಾಂಕ್​ಗಳು ನಿರೀಕ್ಷಿತ ಆರ್ಥಿಕ ಪ್ರಗತಿ ಸಾಧಿಸಿಲ್ಲ. ಇತರೆ ಬ್ಯಾಂಕ್​ಗಳಿಗೆ ಹೋಲಿಸಿದರೆ ಎಸ್​ಬಿಐ ಸಾಧನೆ ತೃಪ್ತಿಕರವಾಗಿಲ್ಲ. ಶಿಕಾರಿಪುರ ಎಸ್​ಬಿಐ ಶಾಖೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದು ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಗುರುವಾರ ಆಯೋಜಿಸಿದ್ದ ತ್ರೖೆಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಿಎಂ ತವರು ಜಿಲ್ಲೆಯಲ್ಲಿ ಯಾವ ಫಲಾನುಭವಿಗಳೂ ಸರ್ಕಾರದ ಆರ್ಥಿಕ ನೆರವಿನ ಯೋಜನೆಗಳಿಂದ ವಂಚಿತರಾಗದಂತೆ ಬ್ಯಾಂಕ್​ಗಳು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಲ ಸೌಲಭ್ಯಗಳು ಸಕಾಲದಲ್ಲಿ ಜನರಿಗೆ ಸಿಗುವಂತಾಗಬೇಕು. ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸೂಕ್ತ ಸಮಯದಲ್ಲಿ ಆರ್ಥಿಕ ನೆರವು ನೀಡಬೇಕೆಂದರು.

ನ್ಯೂನತೆ ಸರಿಪಡಿಸಿಕೊಳ್ಳಿ : ಕೆಲವು ಬ್ಯಾಂಕ್​ಗಳಲ್ಲಿ ಗ್ರಾಹಕರನ್ನು ನಿರ್ಲಕ್ಷಿಸಲಾಗುತ್ತಿದೆ. ವಿನಾಕಾರಣ ಕೆಲಸದಲ್ಲಿ ವಿಳಂಬ ಮಾಡಲಾಗುತ್ತಿದೆ. ಕೆಲಸದ ಅವಧಿಯಲ್ಲಿ ಸಿಬ್ಬಂದಿ ಕಾಲಹರಣ ಮಾಡುತ್ತಿದ್ದಾರೆಂಬ ಆರೋಪಗಳಿವೆ. ಶಾಖಾ ವ್ಯವಸ್ಥಾಪಕರು ಜನರ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಿ: ಲಾಕ್​ಡೌನ್ ತೆರವಿನ ನಂತರ ಬೀದಿಬದಿ ವ್ಯಾಪಾರಿಗಳು ವಹಿವಾಟು ಆರಂಭಿಸಿದ್ದಾರೆ. ಅವರಿಗೆ 10 ಸಾವಿರ ರೂ.ವರೆಗೆ ಸಾಲ ನೀಡುವ ಯೋಜನೆಯಲ್ಲಿ ಹೆಚ್ಚು ಪ್ರಗತಿಯಾಗಿಲ್ಲ. ಕೂಡಲೇ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಸಾಲ ಮಂಜೂರು ಮಾಡಬೇಕೆಂದು ಬಿವೈಆರ್ ತಿಳಿಸಿದರು.

ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧಾ, ಕೆನರಾ ಬ್ಯಾಂಕ್ ಎಜಿಎಂ ಪೂರ್ಣಿಮಾ ಎಂ.ರಾವ್, ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಯತೀಶ್, ನಬಾರ್ಡ್ ವ್ಯವಸ್ಥಾಪಕ ಬಿ.ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net