

ತೇರದಾಳ: ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ. ಬಡಪಾಯಿಗಳಾದ ಪೌರ ಕಾರ್ಮಿಕರಿಗೆ ವೇತನವಿಲ್ಲದೆ ಅವರ ಬದುಕು ಅತಂತ್ರವಾಗಿದೆ. ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಮುಷ್ಕರ ನಿರತ ಪೌರಕಾರ್ಮಿಕರನ್ನು ಶನಿವಾರ ಭೇಟಿ ಮಾಡಿ ಅವರು ಮಾತನಾಡಿದರು.
ಮೊದಲಿನ ನಮ್ಮ ಸರ್ಕಾರ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಅವರಿಗೆ 11 ತಿಂಗಳ ವೇತನವನ್ನೂ ಕೊಡಲಾಗಿದೆ. ಪಟ್ಟಣದಲ್ಲಿ ಪ್ರಾಮಾಣಿಕವಾಗಿ ಯಾರೂ ತೆರಿಗೆ ಕಟ್ಟುತ್ತಿಲ್ಲ. ಇದರಿಂದ ಪೌರ ಕಾರ್ಮಿಕರಿಗೆ ವೇತನ ಕೊಡುವಲ್ಲಿ ತೊಂದರೆಯಾಗಿದೆ. ಎಲ್ಲರೂ ಸರಿಯಾಗಿ ಪುರಸಭೆ ತೆರಿಗೆ ಕಟ್ಟಿದರೆ ಯಾವುದೇ ತೊಂದರೆಯಾಗುವುದಿಲ್ಲ. ಕೋಟಿಗಟ್ಟಲೇ ಬಾಕಿ ಉಳಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳ ತೆರಿಗೆ ವಸೂಲಿ ಮಾಡಿ ಎಂದು ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಹಣ ಖಾಲಿಯಾಗಿದೆ. ಇದರಿಂದ ಪೌರಕಾರ್ಮಿಕರ ಬದುಕು ಬೀದಿಗೆ ಬಂದಿದೆ. ಪುರಸಭೆ ಕಾನೂನು ಸಲಹೆಗಾರರನ್ನು ಬದಲಾಯಿಸಿ ಕಾನೂನು ಸಲಹೆಗಾರರು ಪುರಸಭೆಗೆ ಹಿತ ಮಾಡುವವರನ್ನು ನೇಮಿಸಿಕೊಳ್ಳಿ ಎಂದು ಮುಖ್ಯಾಧಿಕಾರಿಗೆ ತಿಳಿಸಿದರು.
ಸ್ಥಳೀಯ ತೆರಿಗೆ ವಸೂಲಿ ಮಾಡಿ ಪೌರ ಕಾರ್ಮಿಕರ ವೇತನ ಕೊಡಬೇಕು ಎಂದು ಆದೇಶ ಹೇಳುತ್ತದೆ. ಆದರೆ ಅಷ್ಟೊಂದು ಅನುದಾನ ಪಟ್ಟಣದಲ್ಲಿ ಸಂಗ್ರಹವಾಗುವುದಿಲ್ಲ. ಖಜಾನೆಯಿಂದ ನೇರ ಮೊದಲಿನ ಸರ್ಕಾರ ವೇತನ ಕೊಡುತ್ತಿತ್ತು. ಈಗ ಸರ್ಕಾರ ಮತ್ತೊಮ್ಮೆ ಆದೇಶ ಮಾಡಿ ಪೌರ ಕಾರ್ಮಿಕರ ವೇತನವನ್ನು ಜನರಲ್ ಂಡ್‌ದಲ್ಲಿ ಸ್ಥಳೀಯ ಆಡಳಿತವೇ ಭರಿಸಬೇಕೆಂದು ಹೇಳಿದೆ. ಜನರಲ್ ಂಡ್‌ನ ಅನುದಾನವನ್ನು ಬೀದಿ ದೀಪ ದುರಸ್ತಿ ಕಾರ್ಯ ಹಾಗೂ ನಳಗಳ ದುರಸ್ತಿಗೆ ಬಳಸಿಕೊಂಡರೆ ಪೌರ ಕಾರ್ಮಿಕರ ವೇತನ ಕೊಡಲು ಆಗುವುದಿಲ್ಲ. ಇದನ್ನು ಬೆಳಗಾವಿ ಅಧಿವೇಶನದಲ್ಲಿ ಪೌರಾಡಳಿತ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪೌರಕಾರ್ಮಿಕರ ವೇತನವನ್ನು ಮೊದಲಿನಂತೆ ಖಜಾನೆಯಿಂದ ಸರ್ಕಾರವೇ ಭರಿಸುವಂತೆ ಒತ್ತಾಯಿಸುತ್ತೇನೆ ಎಂದರು.
ಮುಖ್ಯಾಧಿಕಾರಿಗಳನ್ನು ಕುರಿತು ಪಟ್ಟಣದಲ್ಲಿ ಬಾಕಿ ಉಳಿದಿರುವ ತೆರಿಗೆ ವಸೂಲಿ ಮಾಡಿ ಎಷ್ಟಾಗುವುದು ಅಷ್ಟೇ ವೇತನವನ್ನು ಪೌರಕಾರ್ಮಿಕರಿಗೆ ಕೊಡುವಂತೆ ಸಲಹೆ ನೀಡಿದರು.
ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ಸಚಿನ್ ಕೊಡತೆ, ಕಾಶೀನಾಥ ರಾಠೋಡ, ಶಂಕರ ಕುಂಬಾರ ಇತರರಿದ್ದರು.