'ಬ್ಯಾಂಕಿಂಗ್ ಉದ್ಯೋಗಿಗಳಿಗೆ ಸಿಗಲಿದೆ ಅತ್ಯುತ್ತಮ ವೇತನ'

33
Published on

ಮೈಸೂರು: ಬ್ಯಾಂಕಿಂಗ್ ಹುದ್ದೆಗಳು ಅತ್ಯುತ್ತಮ ಸಂಬಳ ಮತ್ತು ಇತರ ಆಕರ್ಷಕ ಭತ್ಯೆಗಳಿರುವುದರಿಂದ ಗೌರವಯುತ ಜೀವನ ನಡೆಸಲು ಸಾಧ್ಯವಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರೂ ಆದ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕಲ್ಯಾಣ್ ಕುಮಾರ್ ಹೇಳಿದರು.
ಜ್ಞಾನಬುತ್ತಿ ಸಂಸ್ಥೆಯಿಂದ ಲಕ್ಷ್ಮೀಪುರಂ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿರುವ 45 ದಿನಗಳ ಎಸ್‌ಎಸ್‌ಸಿ ಬ್ಯಾಂಕಿಂಗ್ ಪರೀಕ್ಷೆಗಳ ಉಚಿತ ತರಬೇತಿ ಶಿಬಿರವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವು ಭ್ರಷ್ಟಾಚಾರಮುಕ್ತ ಮತ್ತು ಪಾರದರ್ಶಕ ಆಯ್ಕೆಗೆ ದೇಶದಲ್ಲೇ ಹೆಸರಾಗಿದೆ. ಸರ್ಕಾರಿ ಉದ್ಯೋಗಗಳ ಆಯ್ಕೆ ಪ್ರಕ್ರಿಯೆ ಹಲವಾರು ವಿವಾದಗಳಿಗೆ ಒಳಗಾಗಿ ನಾಲ್ಕೈದು ವರ್ಷಗಳು ಹಿಡಿಯುತ್ತಿವೆ. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇವಲ ಆರು ತಿಂಗಳೊಳಗಾಗಿ ಅರ್ಜಿಯಿಂದ ಆಯ್ಕೆ ಪ್ರಕ್ರಿಯೆ ಮುಗಿದಿರುತ್ತದೆ ಎಂದರು.
ಸಾಮಾನ್ಯವಾಗಿ ಇಂದು ಬಹುತೇಕ ಬ್ಯಾಂಕ್‌ಗಳಲ್ಲಿ ಉತ್ತರ ಭಾರತದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ನಮ್ಮ ಕನ್ನಡಿಗರಲ್ಲಿ ಈ ಕುರಿತು ತಿಳಿವಳಿಕೆ ಇಲ್ಲ. ಜತೆಗೆ ಬ್ಯಾಂಕ್ ಪರೀಕ್ಷೆಗಳು ಕಷ್ಟ ಎನ್ನುವ ತಪ್ಪು ಮನೋಭಾವ ಇದಕ್ಕೆ ಕಾರಣ ಎಂದರು.
ಇತ್ತೀಚೆಗೆ ಕರ್ನಾಟಕ ಸರ್ಕಾರ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಕೇಂದ್ರಕ್ಕೆ ಒತ್ತಡ ಹಾಕುತ್ತಿರುವುದು ಸ್ವಾಗತಾರ್ಹ. ವಿದ್ಯಾರ್ಥಿ ಜೀವನದಲ್ಲಿ ಹದಿನೈದು ವರ್ಷ ಓದಿದವರು ಕೇವಲ ಆರು ತಿಂಗಳು ಛಲಬಿಡದೆ, ಇಷ್ಟಪಟ್ಟು, ನಿರಂತರ ಅಧ್ಯಯನ ಮಾಡಿದರೆ ನಿಮ್ಮ ಜೀವನ ಕಟ್ಟಿಕೊಳ್ಳುವುದಲ್ಲದೆ ನಿಮ್ಮ ಮನೆ ಜನರು ಮತ್ತು ನೆಂಟರ ಬದುಕನ್ನು ಕಟ್ಟಿಕೊಳ್ಳಲು ನೆರವಾಗಬಹುದು ಎಂದು ಹೇಳಿದರು.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಎಸ್. ರಾಧಾಕೃಷ್ಣ ಮಾತನಾಡಿ, ನಿರಂತರ ಸತತ ಪ್ರಯತ್ನ ಮಾಡುವ ಮೂಲಕ ಯಾವುದೇ ಪರೀಕ್ಷೆಗಳನ್ನು ಅತ್ಯಂತ ಧೈರ್ಯವಾಗಿ ಎದುರಿಸಿ ಸಫಲರಾಗಬಹುದು. ಇದೇ ಜ್ಞಾನಬುತ್ತಿ ಸಂಸ್ಥೆಯೊಡನೆ 30 ವರ್ಷಗಳ ತಮ್ಮ ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿ ಒಡನಾಟವನ್ನು ಸ್ಮರಿಸಿಕೊಂಡರು. ಹಿಂದೆ ಮಾಹಿತಿ ಕೊರತೆ ಇತ್ತು. ಆದರೆ ಈಗ ಎಲ್ಲ ಸೌಲಭ್ಯಗಳು ಇರುವುದರಿಂದ ಶ್ರಮಪಟ್ಟು ಅಧ್ಯಯನ ಮಾಡಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿ ವೈ.ಎನ್.ಶಂಕರೇಗೌಡ ಅವರು ಶಿಬಿರಾರ್ಥಿಗಳಿಗೆ ಶುಭ ಕೋರುತ್ತ ಬ್ಯಾಂಕಿಂಗ್ ಕ್ಷೇತ್ರದ ಹುದ್ದೆಗಳು ಸಮಾಜದಲ್ಲಿ ಒಳ್ಳೆಯ ಗೌರವ ಮತ್ತು ಘನತೆಯನ್ನು ತಂದುಕೊಡುತ್ತವೆ ಎಂದರು.
ಜ್ಞಾನಬುತ್ತಿ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಕೃ.ಪ. ಗಣೇಶ, ಕೆ.ವೈ.ನಾಗೇಂದ್ರ, ಡಾ. ಹೊನ್ನಯ್ಯ, ರೋಹನ್, ರವಿಕುಮಾರ್, ಸಿ.ಕೆ. ಕಿರಣ್, ಕೌಶಿಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net