

ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ಒಟ್ಟು 7.85 ಕೋಟಿ ರೂ. ಗಳ ನಷ್ಟಕ್ಕೆ ಸಿಲುಕಿದೆ ಎಂದು ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕ ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಧ್ಯಕ್ಷ ಪಾಲಹಳ್ಳಿ ದೇವರಾಜು ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ವರದಿ ಮಂಡಿಸಿದ ಅವರು, 2021- 22ನೇ ಸಾಲಿನಲ್ಲಿ 80,75,303 ರೂ. ನಷ್ಟವಾಗಿದೆ. ಹಿಂದಿನ ಸಾಲುಗಳಿಂದ ಒಟ್ಟು 7,05,21,608 ರೂ ಸೇರಿದಂತೆ ಒಟ್ಟು 7.85 ಕೋಟಿ ರೂ.ಗಳ ನಷ್ಟದಲ್ಲಿದೆ ಎಂದು ತಿಳಿಸಿದರು.
ಈ ಹಣವನ್ನು ರೈತರ ಕೃಷಿ ಪರಿಕರ, ಯಂತ್ರ, ವಾಹನ ಖರೀದಿ ಸೇರಿದಂತೆ ವಿವಿಧ ಸಾಲ ನೀಡಲಾಗಿದ್ದು, ಸದಸ್ಯರಿಂದ ವಸೂಲಿ ಆಗದ ಕಾರಣ ಬ್ಯಾಂಕ್ ನಷ್ಟದಲ್ಲಿದೆ ಎಂದರು.
ಇಷ್ಟೊಂದು ಹಣವನ್ನು ವಸೂಲಿ ಮಾಡದೆ ಬಿಟ್ಟಿರುವುದು ಏಕೆ ಎಂದು ಸದಸ್ಯರು ಪ್ರಶ್ನಿಸಿದರು. ಸಾಲ ಮಂಜೂರು ಮಾಡುವಾಗ ಪದಾಧಿಕಾರಿಗಳು ತಮ್ಮವರ ಪರ ವಕಾಲತ್ತು ವಹಿಸುತ್ತೀರಿ. ಸಾಲ ವಸೂಲಾತಿ ಮಾಡುವ ವಿಷಯದಲ್ಲೂ ಈ ರೀತಿಯ ಆಸಕ್ತಿ ತೋರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದೇವರಾಜು ಹಾಗೂ ಪ್ರಭಾರ ವ್ಯವಸ್ಥಾಪಕ ಆರ್.ಶ್ರೀನಿವಾಸ್, ಸಾಲ ವಸೂಲಾತಿಗಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೆಲವರು ಬೆದರಿಕೆ ಹಾಕಿದ್ದಾರೆ ಎಂದರು.
ಸಾಮಾನ್ಯ ಸಭೆ ಆಹ್ವಾನ ಪತ್ರಿಕೆಯನ್ನು ಎಲ್ಲ ಸದಸ್ಯರಿಗೆ ಸಮರ್ಪಕವಾಗಿ ನೀಡಿಲ್ಲ ಎಂದು ಸದಸ್ಯರು ಕಿಡಿಕಾರಿದರು. ಪ್ರಭಾರ ಲೆಕ್ಕಕ್ಕಿಗರಾದ ಪಿ.ಡಿ.ಕಮಲಾಕ್ಷಿ ಇತರರು ಇದ್ದರು.