

ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ.ವಂಚಿಸಿದ ಬ್ಯಾಂಕ್ ಉದ್ಯೋಗಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇ ಗೌಡ 4 ವರ್ಷಗಳ ಸಜೆ ಹಾಗೂ 15,000 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಬ್ಯಾಂಕ್ ಉದ್ಯೋಗಿ ಗ್ರೇಸ್ ಫರ್ನಾಂಡಿಸ್ ಶಿಕ್ಷೆಗೊಳಗಾದ ಅಪರಾಧಿ. ನಿವೃತ್ತ ಶಿಕ್ಷಕಿ ತೆರೆಸಾ ಡಿಸೋಜ ಅವರ ಬ್ಯಾಂಕ್ ಖಾತೆಗೆ ಸಂಬಂಧಿಸಿ 5 ಲಕ್ಷ ರೂ.ಗೂ ಅಧಿಕ ಮೊತ್ತದ ವಂಚನೆ ಮಾಡಿರುವ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಹಿನ್ನೆಲೆ: ತೆರೆಸಾ ಡಿ’ಸೋಜ 2006-07 ಮತ್ತು 2008-09ನೇ ವರ್ಷ ತಮ್ಮ ಪಿಂಚಣಿ ಹಣ ಸೇರಿದಂತೆ ತನ್ನಲ್ಲಿದ್ದ ಮೊತ್ತವನ್ನು ನಗರದ ಮಿಲಾಗ್ರಿಸ್ ಸಮೀಪದ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಠೇವಣಿಯಾಗಿ ಇಡಲು ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ತಮ್ಮ ಪರಿಚಯದ ಗ್ರೇಸ್ ಫರ್ನಾಂಡಿಸ್ ಅವರ ಸಹಾಯ ಪಡೆದುಕೊಂಡಿದ್ದರು. ಗ್ರೇಸ್ ಮೇಲೆ ನಂಬಿಕೆ ಇರಿಸಿ ಅವರ ಮುಖಾಂತರವೇ ಬ್ಯಾಂಕ್ ವ್ಯವಹಾರವನ್ನು ಮಾಡಿಕೊಳ್ಳುತ್ತಿದ್ದರು. ಬಳಿಕ ತೆರೆಸಾರ ಚೆಕ್‌ಬುಕ್ಕನ್ನೂ ಪಡೆದುಕೊಂಡಿದ್ದಳು. ಠೇವಣಿ ಮೊತ್ತದ ವಿವರವನ್ನು ಪಾಸ್‌ಬುಕ್‌ನಲ್ಲಿ ಕಂಪ್ಯೂಟರೀಕೃತವಾಗಿ ನೋಂದಣಿ ಮಾಡದೆ ಗ್ರೇಸ್ ಕೈಯಲ್ಲೇ ಬರೆದು ಕೊಡುತ್ತಿದ್ದಳು. ಬ್ಯಾಂಕ್ ಖಾತೆಗೆ ಹಾಕದೆ ವಂಚಿಸುತ್ತಿದ್ದಳು. ತೆರೆಸಾ ಎಫ್‌ಡಿಗೆ ಹಾಕಲೆಂದು ಹಣ ನೀಡಿದಾಗ ನಕಲಿ ದಾಖಲೆ ಸೃಷ್ಟಿಸಿ ರಶೀದಿ ನೀಡಿದ್ದರು.
ಖಾತೆಯಲ್ಲಿದ್ದದ್ದು 15 ಸಾವಿರ ರೂ!: ತೆರೆಸಾ ಅವರು ಬ್ಯಾಂಕ್‌ಗೆ ಹೋದಾಗ ಗ್ರೇಸ್ ಬ್ಯಾಂಕ್‌ನಲ್ಲಿ ಇರಲಿಲ್ಲ. ವಿಚಾರಿಸಿದಾಗ ಖಾತೆಯಲ್ಲಿ ಇರಬೇಕಾಗಿದ್ದ 5,46,650 ರೂ.ಬದಲು 15,571 ರೂ.ಅಷ್ಟೇ ಇತ್ತು! ಈ ಬಗ್ಗೆ ತೆರೆಸಾ ಗ್ರೇಸ್ ಮನೆಗೆ ಹೋಗಿ ವಿಚಾರಿಸಿದಾಗ ಆಕೆ ಮತ್ತು ಆಕೆಯ ಪತಿ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರೇಸ್ ಅವರನ್ನು ಉದ್ಯೋಗದಿಂದ ಅಮಾನತು ಮಾಡಲಾಗಿತ್ತು. ಅಂದು ಇನ್ಸ್‌ಪೆಕ್ಟರ್ ಆಗಿದ್ದ ವಿನಯ್ ಗಾಂವ್ಕರ್ ತನಿಖೆ ನಡೆಸಿ 2011ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪಿನ ಬಗ್ಗೆ ಸರ್ಕಾರ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಗ್ರೇಸ್ ಡಿಸೋಜ ಅಪರಾಧಿ ಎಂದು ತೀರ್ಪು ನೀಡಿದೆ.
ಗ್ರಾಹಕರಿಗೆ ನಂಬಿಕೆ ದ್ರೋಹ: ಬ್ಯಾಂಕ್‌ನಿಂದ ದಾಖಲೆಗಳನ್ನು ಕಳವು ಮಾಡಿದ ಅಪರಾಧಕ್ಕೆ 2 ವರ್ಷ ಸಜೆ, 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 2 ತಿಂಗಳು ಸಜೆ, ನಕಲಿ ದಾಖಲಿ ಸೃಷ್ಟಿಗೆ 1 ವರ್ಷ ಸಜೆ, 1 ಸಾವಿರ ರೂ.ದಂಡ, ದಂಡ ಪಾವತಿಸಲು ತಪ್ಪಿದರೆ 1 ತಿಂಗಳು ಸಜೆ, ನಕಲಿ ದಾಖಲೆಯನ್ನು ಅಸಲಿ ಎಂದು ನಂಬಿಸಿ ಬ್ಯಾಂಕ್ ಸಿಬ್ಬಂದಿಯಾಗಿ ಗ್ರಾಹಕರಿಗೆ ನಂಬಿಕೆ ದ್ರೋಹ, ವಂಚನೆ ಎಸಗಿರುವ ಅಪರಾಧಗಳಿಗೆ ತಲಾ ನಾಲ್ಕು ವರ್ಷ ಸಜೆ, 3 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲವಾದರೆ 2 ತಿಂಗಳು ಸಜೆ ವಿಧಿಸಿ ತೀರ್ಪು ನೀಡಿದೆ. ತೆರೆಸಾ ಡಿಸೋಜಗೆ 10,000 ರೂ. ಪರಿಹಾರ ನೀಡುವಂತೆಯೂ ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ವಾದಿಸಿದ್ದಾರೆ.