

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಗ್ರಾಮೀಣ ಭಾಗದ ಬ್ಯಾಂಕ್, ಜ್ಯುವೆಲ್ಲರಿ ಅಂಗಡಿ ಹಾಗೂ ಎಟಿಎಂ ಕೇಂದ್ರಗಳೇ ಇವರ ಟಾರ್ಗೆಟ್, ಜನದಟ್ಟಣೆ ಇರದ ಯಾವುದೇ ಭದ್ರತಾ ಸಿಬ್ಬಂದಿ ಸುಳಿವಿಲ್ಲದ, ಸೈರನ್ ಮತ್ತಿತರ ತಾಂತ್ರಿಕತೆ ಲೋಪವಿರುವ ಕೇಂದ್ರಗಳೆ ಇವರ ಗುರಿ. ಗ್ಯಾಸ್‌ಕಟರ್, ಸಿಲಿಂಡರ್ ಸೇರಿ ದರೋಡೆಗೆ ಬಳಸುವ ಉಪಕರಣಗಳ ಶೇಖರಣೆ ಇರುವ ಟ್ರಕ್ ಇವರ ದರೋಡೆಗೆ ಸಾರಥಿ.
ಇವು ಹೊಸಹಳ್ಳಿ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ ಆರೋಪಿಗಳ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಪ್ರಮುಖ ಅಂಶಗಳಾಗಿವೆ. 2022ರ ನ.25 ರಂದು ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿಯ ಹೊಸಹಳ್ಳಿ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕಣದ ಅರೋಪಿಗಳ ತನಿಖೆಯಲ್ಲಿ ಬ್ಯಾಂಕ್‌ನಂತ ಹಣಕಾಸು ವ್ಯವಹಾರ ನಡೆಸುವ ಸಂಸ್ಥೆಗಳಲ್ಲಿ ಲೋಪವನ್ನೇ ಬಂಡವಾಳ ಮಾಡಿಕೊಂಡು ದರೋಡೆಗಿಳಿದಿರುವ ಪ್ರಮುಖ ಅಂಶಗಳು ಬೆಳಕಿಗೆ ಬಂದಿದೆ.
ಪೂರ್ವ ಯೋಜಿತ ಕೃತ್ಯ: ಉತ್ತರ ಪ್ರದೇಶದಿಂದ ಪೂರ್ವನಿಯೋಜಿತವಾಗಿ ಲೂಟಿ ಮಾಡಲೆಂದೆ ದರೋಡೆಕೋರರು ಟ್ರಕ್‌ವೊಂದನ್ನು ಸಿದ್ದವಾಗಿಟ್ಟುಕೊಂಡಿದ್ದರು ಎನ್ನಲಾಗಿದೆ, ಗ್ಯಾಸ್‌ಕಟರ್, ಸಿಲಿಂಡರ್ ಸೇರಿ ಇದರಲ್ಲಿ ಕಳ್ಳತನಕ್ಕೆ ಬಳಸುವ ಉಪಕರಣಗಳು ಎಲ್ಲವೂ ಸಿದ್ಧವಿದ್ದವು. ಪ್ರಮುಖ ಉಪಕರಣಗಳನ್ನು ಇಟ್ಟುಕೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಕನ್ನ ಹಾಕಿದ್ದರು. ಬಹಳ ದಿನಗಳಿಂದ ಹೊಂಚು ಹಾಕಿದ ದರೋಡೆಕೋರರರು ಬ್ಯಾಂಕ್ ಬಳಿ ಚಲನವಲನಗಳನ್ನು ಗಮನಿಸಿದ್ದರು. ವಸತಿ ಪ್ರದೇಶದಿಂದ ದೂರವಿದ್ದ ಜನದಟ್ಟಣೆ ಇಲ್ಲದ ಪ್ರದೇಶವಾಗಿರುವುದು ದರೋಡೆಕೋರರಿಗೆ ವರದಾನವಾಗಿತ್ತು.
ಹಲವು ಪ್ರಕರಣಗಳಲ್ಲಿ ಭಾಗಿ: ದೊಡ್ಡಬಳ್ಳಾಪುರದ ಹೊಸಹಳ್ಳಿ ದಾವಣೆಗೆರೆ ಶಹಪೂರ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿನ ಎಸ್‌ಬಿಐ ಬ್ಯಾಂಕ್, ಹಾವೇರಿಯ ತಡಸದಲ್ಲಿಯೂ ಇದೇ ಮಾದರಿಯಲ್ಲಿ ದರೋಡೆ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. 2001ರಿಂದ 2024ರ ಅವಧಿಯಲ್ಲಿ ಐದಾರು ಕಡೆಗಳಲ್ಲಿ ದರೋಡೆ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ.
ಇಡುಗಂಟಿನ ಮೇಲೆ ಕಣ್ಣು: ಉತ್ತರ ಪ್ರದೇಶದ ಮೂಲದ ದರೋಡೆಕೋರರು ಬ್ಯಾಂಕ್, ಎಟಿಎಂ ಹಾಗೂ ಜ್ಯುವೆಲ್ಲರಿ ಅಂಗಡಿಗಳ ಮೇಲೆಯೇ ಕಣ್ಣು ಹಾಕುತ್ತಿದ್ದರು. ಒಮ್ಮೆ ದರೋಡೆ ಮಾಡಿದರೆ ಕೋಟಿಕಟ್ಟಲೆ ಮೌಲ್ಯದ ಚಿನ್ನಾಭರಣ ನಗದು ದೋಚಿ ಪರಾರಿಯಾಗುತ್ತಿದ್ದರು.
ತಾಂತ್ರಿಕ ಲೋಪವೇ ಕಾರಣ: ಗ್ರಾಮೀಣ ಪ್ರದೇಶಗಳಲ್ಲಿನ ಹಣಕಾಸಿನ ಸಂಸ್ಥೆಗಳಲ್ಲಿನ ತಾಂತ್ರಿಕ ಲೋಪವನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದರು. ತಿಂಗಳುಗಟ್ಟಲೆ ಗ್ರಾಹಕರ ಸೋಗಿನಲ್ಲಿ ವಹಿವಾಟು, ಚಲನವಲಯಗಳ ಮೇಲೆ ನಿಗಾ ಇಡುತ್ತಿದ್ದರು. ಇಷ್ಟು ದರೋಡೆ ಪ್ರಕರಣಗಳಲ್ಲಿ ಹಣಕಾಸಿನ ಸಂಸ್ಥೆಗಳಲ್ಲಿನ ನಿರ್ಲಕ್ಷ್ಯ, ಭದ್ರತೆ ಕೊರತೆಯೇ ಕಾರಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಐದಾರು ಪ್ರಕರಣಗಳಲ್ಲಿ ಮೂರು ಬ್ಯಾಂಕ್, ಒಂದು ಎಟಿಎಂ ಕೇಂದ್ರ ಹಾಗೂ ಮತ್ತೊಂದು ಜ್ಯವೆಲ್ಲರಿ ಅಂಗಡಿಯಲ್ಲಿ ದರೋಡೆಯಾಗಿದೆ ಎನ್ನಲಾಗಿದೆ.
ಬ್ಯಾಂಕ್, ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ: ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕ್, ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಇಂಥ ದರೋಡೆಗೆ ದಾರಿ ಮಾಡಿಕೊಡುವಂತಾಗಿದೆ, ಸಿಸಿ ಕ್ಯಾಮರಾಗಳ ನಿರ್ವಹಣೆ ಕೊರತೆಯೂ ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಸೈರನ್ ಕೆಲಸ ನಿರ್ವಹಿಸದಿರುವುದು ದರೋಡೆಕೋರರಿಗೆ ರಹದಾರಿಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.