ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬ್ಯಾಂಕ್ ಕಳ್ಳತನ ಪ್ರಕರಣ, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು, ಮ್ಯಾನೇಜರ್ ಸಹಿತ ಮೂವರ ಬಂಧನ, ರೂ.10.75 ಕೋಟಿ ಮೌಲ್ಯದ ಚಿನ್ನ ವಶ

MANAGULI THEFT CASE
Published on

ವಿಜಯಪುರ:  ರಾಜ್ಯವನ್ನೇ ಬೆಚ್ಚಿ ಬೀಳಿಸಿದ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿನ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ವಿಜಯಪುರ ಪೊಲೀಸರು, ಮೂವರನ್ನು ಬಂಧಿಸಿ ಕೆಜಿಗಟ್ಟಲೆ ಚಿನ್ನ ವಶಕ್ಕೆ ಪಡೆದಿದ್ದಾರೆ.

ಕಳೆದ ಮೇ 29 ರಂದು ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ನಡೆದಿದ್ದ ಬಹುದೊಡ್ಡ ಕಳ್ಳತನ ಪ್ರಕರಣದಲ್ಲಿ ಲಾಕರ್‌ನಲ್ಲಿ ಇರಿಸಿದ್ದ 53.26 ಕೋಟಿ ರೂಪಾಯಿ ಮೌಲ್ಯದ 58.97 ಕೆಜಿ ಚಿನ್ನಾಭರಣ ಹಾಗೂ 5,20,450 ರೂ. ನಗದು ಕಳ್ಳತನವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ಒಟ್ಟು ಎಂಟು ತನಿಖಾ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿತ್ತು. ಇದೀಗ ತನಿಖಾ ತಂಡ ಮೊದಲ ಹಂತದ ಕಾರ್ಯಾಚರಣೆ ಮುಗಿಸಿದ್ದು, ಎರಡನೇ ಹಂತದ ತನಿಖೆಗೆ ಹೆಜ್ಜೆಯನ್ನಿರಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಲಕ್ಷ್ಮಣ ನಿಂಬರಗಿ ವಿವರಿಸಿದರು.

ಬ್ಯಾಂಕ್ ಮ್ಯಾನೇಜರ್ ಆಗಿದ್ದ ಹುಬ್ಬಳ್ಳಿಯ ಗದಗ ರಸ್ತೆಯ ಕೋಠಾರಿ ನಗರದ ನಿವಾಸಿ ವಿಜಯಕುಮಾರ ಮೋಹನರಾವ ಮಿರಿಯಾಲ (41), ಜನತಾ ಕಾಲನಿಯ ನಿವಾಸಿ ಚಂದ್ರಶೇಖರ ಕೊಟಿಲಿಂಗಮ್ ನೆರೆಲ್ಲಾ (38) ಹಾಗೂ ಚಾಲುಕ್ಯ ನಗರದ ನಿವಾಸಿ ಸುನೀಲ ನರಸಿಂಹಲು ಮೋಕಾ (40) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ್ದ 2 ಕಾರು ಹಾಗೂ ಕಾರ್‌ನಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 10.75 ಕೋಟಿ ರೂಪಾಯಿ ಮೌಲ್ಯದ 10.5 ಕೆಜಿ ಬಂಗಾರದ ಆಭರಣ ಹಾಗೂ ಕರಗಿಸಿದ ಬಂಗಾರ ವಶಕ್ಕೆ ಪಡೆಯಲಾಗಿದೆ ಎಂದು ನಿಂಬರಗಿ ತಿಳಿಸಿದರು.

ಬಂಧಿತ ಆರೋಪಿಗಳ ಪೈಕಿ ಮೊದಲನೇದವನಾದ ವಿಜಯಕುಮಾರ ಅದೇ ಬ್ಯಾಂಕ್‌ನ ಮ್ಯಾನೇಜರ್ ಆಗಿ ಕಳ್ಳತನಕ್ಕೂ ಕೆಲವ ದಿನ ಮುಂಚೆ ವರ್ಗವಾಗಿದ್ದರು. ಆರೋಪಿ ಚಂದ್ರಶೇಖರ ಜೂಜುಕೋರನಾಗಿದ್ದು ಕ್ಯಾಸಿನೋಗಳಲ್ಲಿ ಜೂಜಾಡುತ್ತಿದ್ದನು. ಅದಕ್ಕಾಗಿ ಈತ ಶ್ರೀಲಂಕಾದವರೆಗೂ ಹೋಗಿ ಬರುತ್ತಿದ್ದನು. ಇನ್ನು ಇವರಿಬ್ಬರಿಗೆ ಸುನೀಲ ಸಹಾಯಕನಾಗಿದ್ದನು. ಬ್ಯಾಂಕ್ ಕಳ್ಳತನಕ್ಕಾಗಿ ತಿಂಗಳಾನುಗಟ್ಟಲೆ ಯೋಜನೆ ರೂಪಿಸಿದ್ದ ಇವರು ಫೆಬ್ರವರಿಯಿಂದಲೇ ರೂಪುರೇಷೆ ಸಿದ್ಧಪಡಿಸತೊಡಗಿದ್ದರು. ಮಾರ್ಚ್ ಮತ್ತು ಏಪ್ರೀಲ್ ತಿಂಗಳಲ್ಲಿ ಸಭೆ ನಡೆಸಿ ರೂಪುರೇಷೆ ಹಾಕಿದ್ದರು. ಮೇ 9 ಕ್ಕೆ ವರ್ಗಾವಣೆಯಾಗುವ ಮಾಹಿತಿ ಅರಿತ ಮ್ಯಾನೇಜರ್ ವಿಜಯಕುಮಾರ ಮೊದಲೇ ಬ್ಯಾಂಕ್‌ನ ಕೀಲಿಗಳನ್ನು ನಕಲಿಯಾಗಿ ಸಿದ್ಧಪಡಿಸಿಕೊಂಡಿದ್ದನು. ಹೊಸ ಅಧಿಕಾರಿ ಬಂದ ಮೇಲೆ ಕೃತ್ಯ ಎಸಗಿದರೆ ಸಂಶಯ ಬರುವುದಿಲ್ಲವೆಂದು ಅರಿತಿದ್ದರು. ಮೇ 23 ರಂದು ಆರ್‌ಸಿಬಿ ಹಾಗೂ ಹೈದ್ರಾಬಾದ್ ತಂಡದ ಐಪಿಎಲ್ ಪಂದ್ಯಾವಳಿ ಸಂದರ್ಭವೇ ಕೃತ್ಯ ಎಸಗಲು ಮುಹೂರ್ತ ನಿಗದಿಗೊಳಿಸಿದ್ದರು. ಆರ್‌ಸಿಬಿ ಗೆದ್ದರೆ ಸಂಭ್ರಮಾಚರಣೆ ಸಂದರ್ಭ ಗದ್ದಲದಲ್ಲಿಯೇ ಕಳ್ಳತನ ನಡೆಸುವ ಹುನ್ನಾರ ನಡೆಸಿದ್ದರು. ಆದರೆ, ಆರ್‌ಸಿಬಿ ತಂಡ ಸೋಲನುಭವಿಸಿದ ಹಿನ್ನೆಲೆ ಮುಹೂರ್ತ ಮುಂದೂಡಿದ್ದರು. ಮೇ 24 ರಂದು ಸಿಸಿ ಕ್ಯಾಮೆರಾ ತಿರುಗಿಸಿಟ್ಟಿದ್ದರಲ್ಲದೇ ಕೇಬಲ್ ಸಹ ಕಡಿತಗೊಳಿಸಿದ್ದರು. ಆದರೆ ಕಳ್ಳತನ ಮಾಡಲಾಗಲಿಲ್ಲ. ಹೀಗಾಗಿ ಮೇ 29ರಂದು ವ್ಯವಸ್ಥಿತವಾಗಿ ಮಾಟ ಮಂತ್ರ ಮಾಡಿಸಿ, ಖಾರದ ಪುಡಿ ಎರಚಿ, ನಕಲಿ ಕೀ ಬಳಸಿ ಕಳ್ಳತನ ನಡೆಸಿದ್ದಾರೆ. ಸಾಗಾಟಕ್ಕಾಗಿ ಲಾರಿ ಮತ್ತು ಬೈಕ್ ಸಹ ಬಳಸಿರುವುದು ತಿಳಿದು ಬಂದಿದೆ ಎಂದು ನಿಂಬರಗಿ ತಿಳಿಸಿದರು.

ಕಳ್ಳತನಕ್ಕಾಗಿ ಸಾಕಷ್ಟು ಮಾನಸಿಕ, ದೈಹಿಕ ತಯಾರಿ ಮಾಡಿಕೊಂಡಿದ್ದ ಕಳ್ಳರು ನೆಟ್‌ಫ್ಲಿಕ್ಸ್ ಸೇರಿದಂತೆ ಮುಂತಾದ ಕಡೆ ಸಿನೆಮಾಗಳನ್ನು ನೋಡಿದ್ದಾರೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಕಳ್ಳರು ಮಾಟ ಮಂತ್ರ ಮಾಡಿಸಿದ್ದನ್ನು ತಿಳಿದು ಅದನ್ನು ಅನುಸರಿಸಿದ್ದಾರೆ. ಶ್ವಾನದಳದ ದಿಕ್ಕು ತಪ್ಪಿಸಲು ಖಾರದ ಪುಡಿ ಎರಚಿದ್ದಾರೆ. ಇದೆಲ್ಲವನ್ನು ತಂಡ ಚುರುಕಿನ ಕಾರ್ಯಾಚರಣೆ ಮೂಲಕ ಕಂಡುಕೊಂಡಿದ್ದು, ಇನ್ನೊಂದು ಹಂತದ ತನಿಖೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ತನಿಖೆ ಪೂರ್ಣಗೊಳಿಸಿ ಕುತೂಹಲಗಳಿಗೆ ತೆರೆ ಎಳೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಎಸ್‌ಪಿ ನಿಂಬರಗಿ ಪ್ರತಿಕ್ರಿಯಿಸಿದರು.

ಎಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಟಿ.ಎಸ್. ಸುಲ್ಫಿ, ಸುನೀಲ ಕಾಂಬ್ಳೆ, ಬಲ್ಲಪ್ಪ ನಂದಗಾವಿ, ಸಿಪಿಐ ರಮೇಶ ಅವಜಿ, ಗುರುಶಾಂತ ದಾಶ್ಯಾಳ, ಅಶೋಕ ಚವಾಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net