

ಗುರುಪುರ: ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ ಮಂಗಳೂರು ಘಟಕ, ಶ್ರೀ ದುರ್ಗಾ ಯುವಕ ಮಂಡಲ ಕುಪ್ಪೆಪದವು ಮತ್ತು ಕರ್ನಾಟಕ ರೈತ ಸಂಘ ಹಸಿರು ಸೇವೆ ಆಶ್ರಯದಲ್ಲಿ, ಕೆನರಾ ಬ್ಯಾಂಕ್‌ನ ವಿವಿಧ ಶಾಖೆಗಳ ಉದ್ಯೋಗಿಗಳಿಗಾಗಿ ಭಾನುಮಾರ ಕುಪ್ಪೆಪದವು ನಡಿಕಂಬ್ಳಗುತ್ತು ಕಂಬಳ ಗದ್ದೆಯಲ್ಲಿ ಕೆಸರುಗದ್ದೆ ಆಟೋಟ ಸ್ಪರ್ಧೆ ‘ಬ್ಯಾಂಕ್ ಅಧಿಕಾರಿಗಳ ನಡಿಗೆ ರೈತರ ಕಡೆಗೆ’ ಕಾರ್ಯಕ್ರಮ ನಡೆಯಿತು.
ಬ್ಯಾಂಕ್‌ನಲ್ಲಿ ಲೆಕ್ಕಾಚಾರ, ಸಾಲ ಹೀಗೆ ಅನೇಕ ಆರ್ಥಿಕ ವ್ಯವಹಾರ ನಡೆಸುತ್ತಾ ದಿನ ಕಳೆಯುತ್ತಿರುವ ಬ್ಯಾಂಕ್ ಅಧಿಕಾರಿಗಳು ಕೆಸರು ಗದ್ದೆಗಿಳಿದು ಖುಷಿಪಟ್ಟುಕೊಂಡರು. ಲೆಕ್ಕಕ್ಕಿಲ್ಲದಷ್ಟು ಬಾರಿ ಕೆಸರಿನಲ್ಲಿ ಓಡಿ ಬಿದ್ದೆದ್ದರು. ಬೆಳಗ್ಗೆ ಆಟಿ ಕಳೆಂಜ ನೃತ್ಯದ ಬಳಿಕ ಸಂಪ್ರದಾಯದಂತೆ ಆಟಿ ಕಳೆಂಜನಿಗೆ ಅಕ್ಕಿ, ತೆಂಗಿನಕಾಯಿ, ಅಡಕೆ, ವೀಳ್ಯದೆಲೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೆಸರುಗದ್ದೆಯಲ್ಲಿ ನಿಧಿ ಶೋಧ, ಓಟದ ಸ್ಪರ್ಧೆ, ಹಗ್ಗ-ಜಗ್ಗಾಟ, ಮಾಲಿಬಾಲ್ ಮತ್ತಿತರ ಸ್ಪರ್ಧೆ ನಡೆದವು. ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರೂ ಆಟಿ ತಿಂಗಳ ವಿಶೇಷ ತಿಂಡಿ-ತಿನಿಸು, ಖಾದ್ಯಗಳಾದ ಪತ್ರೊಡೆ, ಹಲಸಿನ ಗಟ್ಟಿ ಸವಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬ್ಳಗುತ್ತು, ಕೆನರಾ ಬ್ಯಾಂಕ್ ಅಫೀಸರ್ಸ್‌ನ ರಮೇಶ್ ನಾಯಕ್, ಗಡಿಕಾರ ಇರುವೈಲು ಡೊಡ್ಡಗುತ್ತು ಜಗದೀಶ ಶೆಟ್ಟಿ, ರೈತ ಮುಖಂಡರಾದ ದಯಾನಂದ ಶೆಟ್ಟಿ ಕುಲವೂರು, ಶೇಖ್ ಅಬ್ದುಲ್ಲ ಕುಪ್ಪೆಪದವು, ಶೈಲಜಾ ಎಂ.ಶೆಟ್ಟಿ, ಪ್ರತಿಭಾ ಎಸ್.ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ತೀರ್ಪುಗಾರರಾದ ದಿನಕರ ಮೇಂಡ, ಶಂಕರ್ ಶೆಟ್ಟಿ, ನಾಗೇಶ್ ನಾಯ್ಕ ಮತ್ತಿತರರು ಇದ್ದರು.