

ಹುಬ್ಬಳ್ಳಿ: ಕರ್ನಾಟಕದಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಇಲ್ಲಿಯ ವಿದ್ಯಾನಗರದ ಸ್ಟೆಲ್ಲರ್ ನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ವಲಯ ಕಚೇರಿಯನ್ನು ಆರಂಭಿಸಲಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಎ.ಎಸ್. ರಾಜೀವ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಇದಾಗಿದೆ. ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ ಒದಗಿಸಲು ಪ್ರಯತ್ನಿಸುತ್ತಿದೆ ಎಂದರು.
ಬೆಂಗಳೂರಿನ ನಂತರ ಎರಡನೇ ವಲಯ ಕಚೇರಿ ಇದಾಗಿದೆ. ದೇಶದ ಜಿಡಿಪಿಗೆ ಕರ್ನಾಟಕ ಹೆಚ್ಚಿನ ಕೊಡುಗೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ್ ಇನ್ನಷ್ಟು ಶಾಖೆಗಳನ್ನು ಇಲ್ಲಿ ಆರಂಭಿಸಿ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಕೈಗಾರಿಕೆಗಳ ಬೆಳವಣಿಗೆ ಅಷ್ಟೇ ಅಲ್ಲ ಬಿಜನೆಸ್ ಹಬ್ ಆಗಿ ಕರ್ನಾಟಕ ಬೆಳೆಯುತ್ತಿದೆ. ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳು ಸೇರಿ ಸದ್ಯ 75 ಶಾಖೆಗಳು ಇವೆ. ಬರುವ ಮಾರ್ಚ್ ವೇಳೆಗೆ ಇನ್ನೂ 17 ಶಾಖೆಗಳನ್ನು ಆರಂಭಿಸುವ ಗುರಿ ಇದೆ. ಹುಬ್ಬಳ್ಳಿ ವಲಯ ವ್ಯಾಪ್ತಿಯಲ್ಲಿ 36 ಶಾಖೆಗಳು ಬರುತ್ತವೆ ಎಂದರು.
ಹುಬ್ಬಳ್ಳಿಯಲ್ಲಿ ವಲಯ ಕಚೇರಿ ಆರಂಭಿಸಿದ್ದರಿಂದ ಈ ಭಾಗದ ಬ್ಯಾಂಕಿಂಗ್ ವ್ಯವಹಾರಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲಿವೆ. ಗ್ರಾಹಕರಿಗೆ ಶ್ರೀ ಸೇವೆ ಲಭ್ಯವಾಗಲಿದೆ ಎಂದರು.
ಹುಬ್ಬಳ್ಳಿ ವಲಯ ವ್ಯವಸ್ಥಾಪಕ ಸುಚೇತ್ ಡಿಸೋಜಾ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕರಾದ ಚೈತ್ರಾ ದಾತಾರ, ಸಿಬ್ಬಂದಿ ಇದ್ದರು.