

ಮಂಡ್ಯ: ಮಹಿಳಾ ಸಬಲೀಕರಣ ಇಂದಿನ ದಿನಗಳಲ್ಲಿ ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕಿ ಜಿ.ರೂಪಾ ಹೇಳಿದರು.
ನಗರದ ಕೆಎಚ್‌ಬಿ ಕಾಲನಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರತಿ ಮಹಿಳೆಯೂ ತನ್ನ ದುಡಿಮೆಯಿಂದಲೇ ಜೀವನ ಸಾಗಿಸಬೇಕೆಂಬ ಅಭಿಲಾಷೆ ಹೊಂದಿರುತ್ತಾರೆ. ಅವಳ ಆಶಯಕ್ಕೆ ಪೂರಕವಾಗಿ ಸ್ವ ಉದ್ಯೋಗದ ಶಕ್ತಿ ಸಾಮರ್ಥ್ಯವನ್ನು ಸಂಸ್ಥೆಯು ತರಬೇತಿ ಮೂಲಕ ತುಂಬುತ್ತಿದೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಎಂ.ಪಿ.ದೀಪಕ್ ಮಾತನಾಡಿ, ಹೆಣ್ಣನ್ನು ಪ್ರಕೃತಿ ಮಾತೆಗೆ ಹೋಲಿಸಲಾಗುತ್ತದೆ. ಅದರಂತೆಯೇ ವಿಶ್ವ ಪರಿಸರ ದಿನದಂದು ಹೆಣ್ಣು ಮಕ್ಕಳಿಗೆ ತುಂಬಾ ಉಪಯುಕ್ತವಾದ ಹಾಗೂ ಅಗತ್ಯವಾದ ತರಬೇತಿ ಉದ್ಘಾಟಿಸುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ವಿ.ವಿವೇಕ್ ಇದ್ದರು. ವಿಶ್ವ ಪರಿಸರ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿ ಗಿಡ ನೆಡಲಾಯಿತು. ತರಬೇತಿಯಲ್ಲಿ 70 ಮಹಿಳೆಯರು ಭಾಗವಹಿಸಿದ್ದರು.