ಬ್ಯಾಂಕ್ ಹಣ ದುರುಪಯೋಗ ಅಪರಾಧ ಸಾಬೀತು 3 ವರ್ಷ ಜೈಲು, 5 ಸಾವಿರ ರೂ. ದಂಡ ವಿಧಿಸಿ ತೀರ್ಪು

judge
Published on

ಮಂಗಳೂರು: ದೇರಳಕಟ್ಟೆ ಯೇನೆಪೋಯ ಶಾಖೆಯ ವಿಜಯ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ವಿಕಾಸ್ ವಿ.ಶೆಟ್ಟಿ ಬ್ಯಾಂಕಿನ ಹಣ ದುರುಪಯೋಗ ಮಾಡಿದ ಪ್ರಕರಣ ಸಾಬೀತಾಗಿದ್ದು, 2ನೇ ಸಿಜೆಎಂ ನ್ಯಾಯಾಲಯ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.


2017 ಡಿ.28ರಿಂದ 30ರ ತನಕ ಶಾಖೆಯ ಮ್ಯಾನೇಜರ್ ಸಂದೀಪ್ ಗದ್ದೆ ಅವರು ರಜೆಯಲ್ಲಿದ್ದರು. ವಿಕಾಸ್ ಶೆಟ್ಟಿ ಡಿ.29ರಂದು ಬ್ಯಾಂಕ್‌ನ ನಗದು ವಿಭಾಗದಲ್ಲಿ ಕೆಲಸ ಮಾಡಿದ್ದು, ಪ್ರಭಾರ ಮ್ಯಾನೇಜರ್ ಆಗಿದ್ದವರು ಸಂಜೆ ಕ್ಲೋಸಿಂಗ್ ಕ್ಯಾಶನ್ನು ಬ್ಯಾಂಕ್‌ನ ಫಿನಾಕಲ್ ಸಾಫ್ಟ್‌ವೇರ್‌ನಲ್ಲಿ ಟ್ಯಾಲಿ ಮಾಡಿದಾಗ ಕ್ಲೋಸಿಂಗ್ ಕ್ಯಾಶ್ ಟ್ಯಾಲಿ ಆಗಿಲ್ಲ. 27,29,875 ರೂ. ಕಡಿಮೆ ಕಂಡು ಬಂದಿತ್ತು. ಈಬಗ್ಗೆ ವಿಕಾಸ್ ಅವರಲ್ಲಿ ವಿಚಾರಿಸಿದಾಗ ಅವರು ಹಣ ತೆಗೆದಿರುವುದಾಗಿ ಒಪ್ಪಿಕೊಂಡಿದ್ದರು. ಆ ಹಣವನ್ನು ಮರುದಿನ ಬ್ಯಾಂಕಿಗೆ ಮರು ಪಾವತಿ ಮಾಡಿದ್ದರು.


ವಿಜಯಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ಆಗಿದ್ದ ಶ್ರೀಧರ್ ಮೂರ್ತಿ ಅವರು ಇಕಾನಾಮಿಕ್ ಆ್ಯಂಡ್ ನಾರ್ಕೋಟಿಕ್ ಅಪರಾಧ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಅಂದಿನ ಉಪನಿರೀಕ್ಷಕಿ ಲತಾ ಕೆ.ಎನ್. ಅವರು ಪ್ರಕರಣ ದಾಖಲಿಸಿ, ಪೊಲೀಸ್ ನಿರೀಕ್ಷಕರಾಗಿದ್ದ ಕೆ.ಕೆ.ರಾಮಕೃಷ್ಣ ಅವರು ಆರೋಪಿ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪಿ ಸಾರ್ವಜನಿಕ ಹಣವನ್ನು ತನ್ನ ಸ್ವಂತ ಉಪಯೋಗಕ್ಕೆ ದುರುಪಯೋಗಪಡಿಸಿ ನಂಬಿಕೆ ದ್ರೋಹ ಎಸಗಿರುವುದು ತನಿಖೆ ಹಾಗು ಸಾಕ್ಷಾೃಧಾರಗಳಿಂದ ಸಾಬೀತಾಗಿತ್ತು.


ಪ್ರಕರಣದ ಎಲ್ಲ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಮಧುಕರ ಪಿ.ಭಾಗವತ್ ಕೆ. ಅವರು ವಿಕಾಸ್ ವಿ.ಶೆಟ್ಟಿ ಅವರು ತಪ್ಪಿತಸ್ಥನೆಂದು ನಿರ್ಣಯಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net