ಬ್ಯಾಂಕ್‌ಗಳು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು

bank meet
Published on

ಮಡಿಕೇರಿ:

ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳು ತಮ್ಮ ಲಾಭಾಂಶದ ಗುರಿ ಜತೆಗೆ ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಬ್ಯಾಂಕರ್‌ಗಳ ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.

ಬ್ಯಾಂಕುಗಳು, ಕೃಷಿಕರು, ಉದ್ಯಮಿಗಳು, ಸಣ್ಣ ಉದ್ಯಮಿಗಳು, ವ್ಯಾಪಾರಸ್ಥರು, ಗುಡಿ ಕೈಗಾರಿಕೆ... ಹೀಗೆ ಪ್ರತಿಯೊಬ್ಬರಿಗೂ ಸಾಲ ನೀಡುವುದರ ಜತೆಗೆ ಬ್ಯಾಂಕುಗಳ ಗುರಿ ಮತ್ತು ಪ್ರಗತಿ ಸಾಧಿಸುವಂತಾಗಬೇಕು. ಹಾಗೆಯೇ ಎಲ್ಲರನ್ನು ಒಳಗೊಂಡ ಸಾಧನೆ ಅತೀ ಮುಖ್ಯ. ಬ್ಯಾಂಕುಗಳು ಕೇಂದ್ರ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬ್ಯಾಂಕುಗಳು ವಾಣಿಜ್ಯ, ವ್ಯಾಪಾರ, ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಹೀಗೆ ಆದ್ಯತಾ ವಲಯಕ್ಕೂ ಹೆಚ್ಚಿನ ಅವಕಾಶ ಮಾಡಬೇಕು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸು ಮಾಡುವಲ್ಲಿ ಬ್ಯಾಂಕುಗಳು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು. ಕೃಷಿ, ಬೆಳೆಸಾಲ, ಶೈಕ್ಷಣಿಕ ಸಾಲಕ್ಕೂ ಒತ್ತು ನೀಡಬೇಕು. ಪ್ರತಿಯೊಬ್ಬರಿಗೂ ಆರ್ಥಿಕ ಶಿಕ್ಷಣ ನೀಡಿ ಬ್ಯಾಂಕುಗಳಲ್ಲಿ ಸಾಲ ಪಡೆದು ಪ್ರಗತಿಯತ್ತ ಮುನ್ನಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ಆಗಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು.

ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುವವರು ಕನ್ನಡ ಭಾಷೆ ಕಲಿಯುವ ಮೂಲಕ ಸ್ಥಳೀಯರಿಗೆ ಹತ್ತಿರವಾಗಬೇಕು. ಇದರಿಂದ ಸ್ಥಳೀಯರ ಸಮಸ್ಯೆ ಇತ್ಯರ್ಥಪಡಿಸಲು ಸಹಕಾರಿಯಾಗಲಿದೆ. ಸ್ಥಳೀಯ ಭಾಷೆ ಕಲಿಯುವುದರಿಂದ ಮಾನಸಿಕ ಸದೃಢತೆ ಹೆಚ್ಚಲಿದೆ. ಸಿಬ್ಬಂದಿ ಸ್ಥಳೀಯ ಭಾಷೆಗಳನ್ನು ಕಲಿಯುವುದರಿಂದ ಬ್ಯಾಂಕ್‌ಗಳಿಗೇ ಲಾಭ ಆಗಲಿದೆ ಎಂದರು.

ಇದಕ್ಕೆ ಧ್ವನಿಗೂಡಿಸಿದ ಆರ್‌ಬಿಐ ಎಜಿಎಂ ಸೂರಜ್ ಆನ್‌ಲೈನ್ ಮೂಲಕ ಕನ್ನಡ ಕಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ ನಾಯಕ್ ಮಾತನಾಡಿ ಜಿಲ್ಲೆಯಲ್ಲಿ 130 ಗ್ರಾಮೀಣ ಬ್ಯಾಂಕ್ ಶಾಖೆಗಳಿದ್ದು, 50 ನಗರ ಬ್ಯಾಂಕ್ ಶಾಖೆಗಳಿವೆ. 2024-25 ರ ಆರ್ಥಿಕ ವರ್ಷದ ಕೃಷಿ ಸಾಲ ಶೇ.99 ರಷ್ಟು, ಸಣ್ಣ ಕೈಗಾರಿಕೆಗಳ ಉದ್ಯಮ ಶೇ.97 ರಷ್ಟುಶೈಕ್ಷಣಿಕ ಸಾಲ ಶೇ.100 ರಷ್ಟುವಸತಿ ಯೋಜನೆ ಶೇ.74 ರಷ್ಟು ಇತರ ಆದ್ಯತಾ ವಲಯ ಶೇ.104 ರಷ್ಟು, ಆದ್ಯತಾ ವಲಯ ಶೇ98ರಷ್ಟು, ಆದ್ಯತೇತರ ವಲಯದಲ್ಲಿ ಶೇ.117 ರಷ್ಟು ಸಾಧನೆ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಪ್ರಸಕ್ತ (2025-26) ಸಾಲಿನಲ್ಲಿ 7,680.10 ಕೋಟಿ ರೂ.ನಷ್ಟು ವಾರ್ಷಿಕ ಜಿಲ್ಲಾ ಸಾಲ ಯೋಜನೆ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಬೆಳೆ ಸಾಲಕ್ಕಾಗಿ 3477.86 ಕೋಟಿ ರೂ., ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉದ್ಯಮಕ್ಕೆ 1388.42 ಕೋಟಿ ರೂ., ಶೈಕ್ಷಣಿಕ ಸಾಲಕ್ಕೆ 33.27 ಕೋಟಿ, ವಸತಿ ಯೋಜನೆಗೆ 59.46 ಕೋಟಿ, ಇತರೆ ಆದ್ಯತಾ ವಲಯಕ್ಕೆ 115.53 ಕೋಟಿ, ಒಟ್ಟಾರೆ ಆದ್ಯತಾ ವಲಯಕ್ಕೆ 5074.54 ಕೋಟಿ ರೂ., ಆದ್ಯತೇತರ ವಲಯಕ್ಕೆ 2606.56 ಕೋಟಿ ರೂ. ವಾರ್ಷಿಕ ಗುರಿ ಹೊಂದಲಾಗಿದೆ ಎಂದು ಗಂಗಾಧರ ನಾಯಕ್ ಅವರು ಮಾಹಿತಿ ನೀಡಿದರು.

ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧಿಕಾರಿ ರಮೇಶ್ ಬಾಬು ಮಾತನಾಡಿ ಕೃಷಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ವಲಯ ಮುಖ್ಯಸ್ಥ ಅರುಣ್ ಕುಲಕರ್ಣಿ ಮಾತನಾಡಿದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ವಿವಿಧ ನಿಗಮದ ವ್ಯವಸ್ಥಾಪಕಿ ಮಹಾದೇವಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಚಿನ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಿವಲಿಂಗಯ್ಯ, ಕೌಶಲ್ಯಾಭಿವೃದ್ಧಿ ಇಲಾಖೆಯ ರೇಖಾ ಗಣಪತಿ ಹಾಗೂ ಇತರರು ತಮ್ಮ ಇಲಾಖೆ ಪ್ರಗತಿ ಸಂಬAಧಿಸಿದAತೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net