

ಬೆಂಗಳೂರು: ಹಣ ಡಬ್ಲಿಂಗ್ ಆಸೆಗೆ ಬಿದ್ದು ಬ್ಯಾಂಕ್ ಆಫ್ ಬರೋಡಾಕ್ಕೆ ಸೇರಿದ 1 ಕೋಟಿ ರೂ. ದುರ್ಬಳಕೆ ಮಾಡಿದ ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರು ಯಲಹಂಕ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮ್ಯಾನೇಜರ್ ಅರುಣ್ ವೀರಮಲ್ಲ, ಕಮಿಷನ್ ಏಜೆಂಟ್ ಬಸವರಾಜ್, ಬ್ಯಾಂಕ್ ಜವಾನ ರಾಮಕೃಷ್ಣ ಹಾಗೂ ಖಾಸಗಿ ವ್ಯಕ್ತಿ ಇಮ್ತಿಯಾಜ್ ಬಂಧಿತರು.
ಸಿದ್ದಯ್ಯ ರಸ್ತೆಯಲ್ಲಿ ಬ್ಯಾಂಕ್ ಆಫ್ ಬರೋಡಾದ ಕರೆನ್ಸಿ ಚೆಸ್ಟ್ (ನಿಧಿ)ಶಾಖೆ ಇದೆ. ಜ.12ರಂದು ಬ್ಯಾಂಕ್ ಮ್ಯಾನೇಜರ್ ಅರುಣ್ ವೀರಮಲ್ಲಯ್ಯ ತಮ್ಮ ಬ್ಯಾಂಕ್ ಶಾಖೆಯ ಕಾರ್ಯ ಚಟುವಟಿಕೆಗಳಿಗಾಗಿ ಸಿದ್ದಯ್ಯ ರಸ್ತೆಯಲ್ಲಿರುವ ಕರೆನ್ಸಿ ಚೆಸ್ಟ್ ಶಾಖೆಗೆ ಹೋಗಿ 1 ಕೋಟಿ ರೂ. ನೀಡುವಂತೆ ಮನವಿ ಸಲ್ಲಿಸಿದ್ದರು. ನಂತರ ಕರೆನ್ಸಿ ಚೆಸ್ಟ್ ಶಾಖೆಯಿಂದ 1 ಕೋಟಿ ರೂ. ತೆಗೆದುಕೊಂಡು ಆರ್.ಆರ್. ನಗರದಲ್ಲಿರುವ ತಮ್ಮ ಬ್ಯಾಂಕ್‌ಗೆ ಬಂದಿದ್ದರು. ಆದರೆ, ಬ್ಯಾಂಕ್‌ಗೆ ಹಣ ಜಮಾ ಮಾಡದೇ ರಾಮಕೃಷ್ಣ ಎಂಬಾತನ ಜತೆ ಹೊರಟು ಹೋಗಿದ್ದರು. ಸಂಜೆ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಾದ ರಮ್ಯಾ ಶೆಟ್ಟಿಗೆ ಕರೆ ಮಾಡಿದ ಅರುಣ್, ‘ನಾನು ಶಾಖೆಗೆ 1 ಕೋಟಿ ರೂ. ತೆಗೆದುಕೊಂಡು ಬರುತ್ತಿದ್ದೇನೆ. ನೀವು ಹಣವನ್ನು ಡೆಪಾಜಿಟ್ ಮಾಡಿದ ಹಾಗೆ ನಗದು ನಮೂದು ಪಾಸ್ ಮಾಡಿ’ ಎಂದು ಸೂಚಿಸಿದ್ದರು. ಇದರಿಂದ ಅನುಮಾನಗೊಂಡ ರಮ್ಯಾ, ಏನೋ ಅಕ್ರಮ ನಡೆದಿದೆ ಎಂದುಕೊಂಡು ಈ ವಿಚಾರವನ್ನು ಬ್ಯಾಂಕ್ ಆಫ್ ಬರೋಡಾ ಬೆಂಗಳೂರು ದಕ್ಷಿಣ ವಿಭಾಗದ ರೀಜನಲ್ ಮ್ಯಾನೇಜರ್ ರಿತೇಶ್ ಕುಮಾರ್ ಗಮನಕ್ಕೆ ತಂದಿದ್ದರು. ಅರುಣ್ ಸಂಜೆವರೆಗೂ ಬ್ಯಾಂಕ್‌ಗೆ ಬಂದಿರಲಿಲ್ಲ.
ರಿತೇಶ್ ಈ ಕುರಿತು ಪರಿಶೀಲಿಸಿದಾಗ, ಅರುಣ್ ಚೆಸ್ಟ್ ನಿಧಿಯಿಂದ ಆರ್‌ಆರ್‌ನಗರ ಶಾಖೆಯ ಪರವಾಗಿ 1 ಕೋಟಿ ರೂ. ತೆಗೆದುಕೊಂಡು ಬ್ಯಾಂಕ್‌ಗೆ ಜಮೆ ಮಾಡದೆ ಇರುವುದು ದೃಢಪಟ್ಟಿತ್ತು. ಸಂಜೆ ಬ್ಯಾಂಕ್‌ಗೆ ಕರೆ ಮಾಡಿದ ಅರುಣ್, ತಾನು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿರುವುದಾಗಿ ತಿಳಿಸಿದ್ದರು. ‘ಬ್ಯಾಂಕ್‌ಗೆ ಜಮೆ ಮಾಡಲೆಂದು ಕರೆನ್ಸಿ ಚೆಸ್ಟ್‌ನಿಂದ 1 ಕೋಟಿ ರೂ. ತರುತ್ತಿದ್ದಾಗ ಯಾರೋ ದರೋಡೆ ಮಾಡಿದ್ದು, ಎಲ್ಲ ಹಣವನ್ನೂ ಕಳೆದುಕೊಂಡಿರುವುದಾಗಿ ಕತೆ ಕಟ್ಟಿದ್ದರು. ಅರುಣ್ ಗೊಂದಲದ ಹೇಳಿಕೆ ನೀಡುತ್ತಿರುವುದನ್ನು ಕೇಳಿ ಅನುಮಾನಗೊಂಡ ರಿತೇಶ್ ಈ ಕುರಿತು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿಚಾರಣೆ ವೇಳೆ ಸತ್ಯ ಬಯಲು: ಪೊಲೀಸರು ಅರುಣ್ ಹಾಗೂ ರಾಮಕೃಷ್ಣನನ್ನು ಕರೆಸಿ ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಯಿತು. ಕೆಲ ದಿನಗಳ ಹಿಂದೆ ಮಧ್ಯವರ್ತಿ ಬಸವರಾಜ್ ಮೂಲಕ ಅರುಣ್‌ಗೆ ಇಮ್ತಿಯಾಜ್ ಎಂಬಾತನ ಪರಿಚಯವಾಗಿತ್ತು. 1 ಕೋಟಿ ರೂ. ನೀಡಿದರೆ ಕೆಲವೇ ಗಂಟೆಗಳಲ್ಲಿ 2 ಕೋಟಿ ರೂ. ಕಪ್ಪುಹಣ ಕೊಡುತ್ತೇನೆ ಎಂದು ಇಮ್ತಿಯಾಜ್ ನಯವಾಗಿ ನಂಬಿಸಿದ್ದ. ಅದರಲ್ಲಿ ಬಸವರಾಜ್‌ಗೂ ಕಮಿಷನ್ ಕೊಡುವುದಾಗಿ ಹೇಳಿದ್ದ. ಈತನ ಮಾತನ್ನು ನಂಬಿದ ಅರುಣ್ ಕಡಿಮೆ ಅವಧಿಯಲ್ಲಿ ಕೋಟಿ ರೂ. ಗಳಿಸಬಹುದು ಎಂದುಕೊಂಡಿದ್ದರು. ಅದರಂತೆ ಕರೆನ್ಸಿ ಚೆಸ್ಟ್‌ನಿಂದ 1 ಕೋಟಿ ರೂ. ಪಡೆದು ಇಮ್ತಿಯಾಜ್‌ಗೆ ಕೊಟ್ಟಿದ್ದರು. ಆದರೆ, ಇಮ್ತಿಯಾಜ್ ಹಣ ಹಿಂದಿರುಗಿಸದೆ ಮೋಸ ಮಾಡಿದಾಗ ದರೋಡೆ ಕತೆ ಕಟ್ಟಿದ್ದರು. ಈಗ ಅರುಣ್ ಪರಿಸ್ಥಿತಿ ‘ಅತ್ತ ದುಡ್ಡೂ ಸಿಗಲಿಲ್ಲ, ಇತ್ತ ಕೆಲಸವೂ ಹೋಯಿತು’ ಎನ್ನುವಂತಾಗಿದೆ.