

ತರೀಕೆರೆ: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎಚ್.ಎಂ.ಮಲ್ಲಿಕಾರ್ಜುನ, ಉಪಾಧ್ಯಕ್ಷರಾಗಿ ಎಚ್.ಆರ್.ನಾಗರಾಜ್ ಅವಿರೋಧ ಆಯ್ಕೆಯಾದರು.
14 ಸಂಖ್ಯಾಬಲ ಹೊಂದಿರುವ ಆಡಳಿತ ಮಂಡಳಿಗೆ ಜ.20ರಂದು 9 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಉಳಿದ ಐದು ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿದಂತೆ ಅರ್ಹರು ನಾಮಪತ್ರ ಸಲ್ಲಿಸದ ಕಾರಣ ಆ ಸ್ಥಾನಗಳು ಖಾಲಿ ಉಳಿದಿವೆ.
ಸೋಮವಾರ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಲಕ್ಕವಳ್ಳಿ ಬಿ ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಎಚ್.ಎಂ.ಮಲ್ಲಿಕಾರ್ಜುನ, ಅಜ್ಜಂಪುರ ಸಿ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಿರ್ದೇಶಕ ಎಚ್.ಆರ್.ನಾಗರಾಜ್ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರ ಹೊರತು ಬೇರ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳಾದ ಮಂಜುನಾಥ್ ಆಯ್ಕೆ ಘೊಷಿಸಿದರು.
ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮ್ಯಾಮ್ಕೋಸ್ ನಿರ್ದೇಶಕ ಆರ್.ದೇವಾನಂದ್, ಕಾಪೋರೆಟ್ ಜಗತ್ತಿನ ಹಾವಳಿಯಲ್ಲಿ ಸಹಕಾರ ಕ್ಷೇತ್ರ ಗೌಣವಾಗುತ್ತಿದೆ. ಬ್ಯಾಂಕ್ನ ಚುನಾಯಿತ ನಿರ್ದೇಶಕರು ಮೈಮರೆತು ಕುಳಿತುಕೊಳ್ಳದೆ ಸಹಕಾರ ಕ್ಷೇತ್ರದ ಮೂಲತತ್ವ ಅಳವಡಿಸಿಕೊಂಡು ಬ್ಯಾಂಕ್ ಸದೃಢಗೊಳಿಸುವ ಕಾರ್ಯಕ್ಕೆ ಕೈಹಾಕಬೇಕಿದೆ. ಈ ದಿಸೆಯಲ್ಲಿ ತಾತ್ವಿಕ ಮತ್ತು ನೈತಿಕ ಶಿಕ್ಷಣದ ಪಾಠ ಕಲಿಯಬೇಕಿದೆ. ಬ್ಯಾಂಕ್ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ವೈಯಕ್ತಿಕ ದೇಣಿಗೆ ಕೊಡುತ್ತೇನೆ ಎಂದು ಭರವಸೆ ನೀಡಿದರು.