ಸಾಲ ನೀಡದ ಅಧಿಕಾರಿಗಳು

Published on

ಕೊಪ್ಪಳ: ಸಹಾಯಧನ ಆಧಾರಿತ ಯೋಜನೆಯಡಿ ಸಾಲ ನೀಡಲು ಬ್ಯಾಂಕಿನ ಅಧಿಕಾರಿಗಳು ಕಳೆದೊಂದು ವರ್ಷದಿಂದ ಸತಾಯಿಸುತ್ತಿದ್ದು, ಅವರ ವಿರುದ್ಧ ಪೊಲೀಸ್​ ದೂರು ದಾಖಲಿಸುವೆ ಎಂದು ಯಲಬುರ್ಗಾ ತಾಲೂಕಿನ ಕೋಳಿಹಾಳ ಗ್ರಾಮದ ನಿವಾಸಿ ಹನುಮಂತಪ್ಪ ವಡ್ಡರ್​ ತಿಳಿಸಿದರು.

ನಾನು ಬೇವೂರು ಗ್ರಾಮೀಣ ಬ್ಯಾಂಕಿನಲ್ಲಿ 23 ವರ್ಷದಿಂದ ವ್ಯವಹಾರ ನಡೆಸುತ್ತಿರುವೆ. ನರ್ಸರಿ ಮಾಡಲು 15 ಲಕ್ಷ ರೂ. ಸಾಲ ನೀಡುವಂತೆ ಮನವಿ ಮಾಡಿದ್ದೆ. 7.5 ಲಕ್ಷ ರೂ. ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಬರಲಿದೆ. ಬಾಕಿ 7.5ಲಕ್ಷ ರೂ. ಸಾಲ ಮರುಪಾವತಿ ಮಾಡಬೇಕು. ವ್ಯವಸ್ಥಾಪಕ ಶಿವಕುಮಾರ ಮಠಪತಿ ಆರಂಭದಲ್ಲಿ ಸಮ್ಮತಿ ಸೂಚಿಸಿದರು. ನನ್ನ ಸಿಬಿಲ್​ ಸ್ಕೋರ್​ ಸಹ ಚೆನ್ನಾಗಿದೆ. ಈ ಹಿಂದೆ ಪಡೆದ ಸಾಲ ಮರುಪಾತಿ ಮಾಡಿರುವೆ. ಯಾವುದೇ ಬಾಕಿ ಇಲ್ಲ. ವರ್ಷದಿಂದ ಸಾಲ ನೀಡಲು ನಿರಾಕರಿಸುತ್ತಿದ್ದಾರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ನಾನು ಈವರೆಗೆ ಯಾವುದೇ ಇಲಾಖೆಯಿಂದ ಸಹಾಯಧನ ಯೋಜನೆ ಪಡೆದಿಲ್ಲ. ತೋಟಗಾರಿಕೆ ಇಲಾಖೆಯಿಂದಲೂ ಪಡೆದಿಲ್ಲ. ಈ ಬಗ್ಗೆ ಮನವರಿಕೆ ಮಾಡಿರುವೆ. ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಲೋಕಾಯುಕ್ತರಿಗೆ ದೂರು ನೀಡಿರುವೆ. ಪರಹರಿಸುವ ಭರವಸೆ ನೀಡಿದ್ದರೂ ಈವರೆಗೂ ನ್ಯಾಯ ಸಿಕ್ಕಿಲ್ಲ. ನಾನು ದಲಿತನೆಂಬ ಕಾರಣಕ್ಕೆ ಸೌಲಭ್ಯ ನೀಡಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net