

ಕಾರವಾರ: ಸದಾಶಿಗಡ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲಿಂಗರಾಜ ಕಲ್ಗುಟಕರ್ ಗ್ರಾಹಕರಿಗೆ ಕೋಟ್ಯಂತರ ರೂ. ಮೋಸ ಮಾಡಿ ತಲೆಮರೆಸಿಕೊಂಡಿದ್ದು, ಆತನನ್ನು ತಕ್ಷಣ ಬಂಽಸಬೇಕು. ಆತ ಹಾಗೂ ಎಲ್ಲ ನಿರ್ದೇಶಕರ ಯಾವುದೇ ಆಸ್ತಿಗಳ ಪರಬಾರೆಗೆ ತಡೆ ನೀಡಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಗ್ರಾಹಕರು, ಸೌಹಾರ್ದ ಸಹಕಾರಿ ಅಭಿವೃದ್ಧಿ ಅಧಿಕಾರಿಗಳಿಂದ ಮೂರು ತಿಂಗಳ ಹಿಂದೆ ಲಿಂಗರಾಜ ಕಲ್ಗುಟಕರ್ ವಿರುದ್ಧ ಚಿತ್ತಾಕುಲಾ ಠಾಣೆಯಲ್ಲಿ ವಂಚನೆಯ ಪ್ರಕರಣ ದಾಖಲಾಗಿತ್ತು. ಸುಮಾರು 600 ಗ್ರಾಹಕರಿಗೆ ಆತ 54 ಕೋಟಿ ರೂ.ಗಳಷ್ಟು ಹಣ ವಂಚನೆ ಮಾಡಿ, ನಾಪತ್ತೆಯಾಗಿದ್ದಾಗಿ ದೂರು ನೀಡಲಾಗಿತ್ತು. ದೂರಿನಲ್ಲಿ ನಿರ್ದೇಶಕರು ಸೇರಿ ಒಟ್ಟು 31 ಜನರ ಹೆಸರನ್ನು ಸೇರಿಸಲಾಗಿತ್ತು. ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಸಿಐಡಿ ತನಿಖೆ ಕೈಗೊಂಡಿದೆ. ಆದರೆ, ಅಧ್ಯಕ್ಷ ಅಥವಾ ಯಾವುದೇ ನಿರ್ದೇಶಕನನ್ನು ಇದುವರೆಗೂ ಬಂಧಿಸಿಲ್ಲ.
ಆದರೆ, ಲಿಂಗರಾಜ ಕಲ್ಗುಟಕರ್ ಅವರ ಪಿತ್ರಾರ್ಜಿತ ಆಸ್ತಿಯನ್ನು ಮನೋಜ ನಾಯ್ಕ ಅವರ ಹೆಸರಿಗೆ ಮಾರಾಟ ಮಾಡಿ ಮೂರು ದಿನಗಳ ಹಿಂದೆ ಸೇಲ್ ಡೀಟ್ ಆಗಿರುವುದು ಪತ್ತೆಯಾಗಿದೆ.ಅದಕ್ಕೆ ತಡೆ ನೀಡುವಂತೆ ನಾವು ತಹಸೀಲ್ದಾರರಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದರು. ಮನೋಜ ನಾಯ್ಕ ಸಹ ಇದೇ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಕಳೆದುಕೊಂಡವರು. ಗ್ರಾಹಕರು ನಡೆಸಿರುವ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಆದರೆ, ಲಿಂಗರಾಜ ಅವರನ್ನು ಹಾಗೂ ಇನ್ನೊಬ್ಬ ಹೋರಾಟಗಾರ ವೆಂಕಟೇಶ ಹರಿಕಂತ್ರ ಎಂಬುವವರನ್ನು ಬೆಲೆಗೆ ಬೀಳಿಸಿಕೊಂಡು ಅವರಿಗೆ ಜಮೀನು ನೀಡಿ, ಇಡೀ ಹೋರಾಟವನ್ನು ದಿಕ್ಕು ತಪ್ಪಿಸುತ್ತಿರುವ ಅನುಮಾನ ಮೂಡಿದೆ. ಹಾಗಾಗಿ ಈ ಪ್ರಕರಣ ಮುಗಿಯುವವರೆಗೆ ಲಿಂಗರಾಜ ಕಲ್ಗುಟಕರ್ ಹಾಗೂ ಯಾವುದೇ ನಿರ್ದೇಶಕರ ಆಸ್ತಿ ಪರಬಾರೆಗೆ ಅವಕಾಶ ನೀಡಬೇಕು ಎಂದರು.
ಡಾ.ಗಜೇಂದ್ರ ನಾಯ್ಕ, ದೊಡ್ಡಣ್ಣವರ್, ಅಕ್ಷತಾ ಬೇಳೂರಕರ್, ಗೀತಾ ಚಿನ್ಮಯ ಜೋಶಿ, ರೋಹಿದಾಸ ಎಸ್.ತಾಮಸೆ, ಆಫಿಯಾ ಶೇಖ್, ಸಾಯಿನಾಥ ತಾಮಸೆ, ಅಜಿತ ನಾಯ್ಕ, ಆರ್.ಎಂ.ನಾಯ್ಕ, ನಂದೇಶ ತಾಂಡೇಲ, ಶಶಿಕಾಂತ ನಾಯ್ಕ, ಸಾಯಿನಾಥ ಮೇತ್ರಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಶೇ.12.5 ರಷ್ಟು ಬಡ್ಡಿ ನೀಡುವುದಾಗಿ ಭರವಸೆ
ಲಿಂಗರಾಜ ಕಲ್ಗುಟಕರ್ ಠೇವಣಿಗೆ ಶೇ.12.5 ರಷ್ಟು ಬಡ್ಡಿ ನೀಡುವುದಾಗಿ ಆಸೆ ತೋರಿಸಿದ್ದ. ಇದರಿಂದ ನಿವೃತ್ತರಾದ ಸರ್ಕಾರಿ ನೌಕರರು, ಎನ್‌ಆರ್‌ಐಗಳು, ಕೆಲವು ಉದ್ದಿಮೆ ಮಾಡುವವರು, ತಮ್ಮ ಮಕ್ಕಳು ಭವಿಷ್ಯಕ್ಕಾಗಿ ಹಣ ಕೂಡಿಟ್ಟವರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಹಣ ತೆಗೆದು ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ ಠೇವಣಿ ಇಟ್ಟಿದ್ದರು. ಆದರೆ, ಅಧ್ಯಕ್ಷ ನಂಬಿಸಿ ಮೋಸ ಮಾಡಿದ್ದಾನೆ. ಅಧ್ಯಕ್ಷನ ಕುಟುಂಬವೇ ಅಕ್ರಮವಾಗಿ 22 ಕೋಟಿ ರೂ. ಸಾಲ ಪಡೆದಿರುವುದು ಪತ್ತೆಯಾಗಿದೆ ಎಂದು ಗ್ರಾಹಕರು ಮೋಸದ ಸ್ವರೂಪ ತೋಡಿಕೊಂಡರು.