ಶ್ರೀಗುರುರಾಘವೇಂದ್ರ ಬ್ಯಾಂಕ್ ಸಿಬ್ಬಂದಿಗೆ ತರಾಟೆ

BANK
Published on

ಬೆಂಗಳೂರು: ಬಸವನಗುಡಿಯ ಶ್ರೀಗುರು  ರಾಘವೇಂದ್ರ ಸಹಕಾರ ಬ್ಯಾಂಕ್​ನಿಂದ ಠೇವಣಿದಾರರಿಗೆ ಹಣ ಪಡೆಯಲು ನಿರ್ಬಂಧ ಹೇರಿರುವ ಸಂಬಂಧ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡರು.

ಸಭೆ ಆಯೋಜಿಸಿದ್ದ ಕಲ್ಯಾಣ ಮಂದಿರದ ಎದುರು ಠೇವಣಿ ಹೂಡಿಕೆ ಮಾಡಿದವರು ಮತ್ತು ಸದಸ್ಯರು ಸೇರಿ ಸಾವಿರಾರು ಮಂದಿ ನೆರೆದಿದ್ದರು. ಆದರೆ, ಬ್ಯಾಂಕ್​ನ ಅಧ್ಯಕ್ಷ ರಾಮಕೃಷ್ಣ ಬಾರದ ಕಾರಣ ಸಭೆ ನಡೆಯಲಿಲ್ಲ. ಈ ವೇಳೆ ಆಕ್ರೋಶಗೊಂಡ ಕೆಲವರು ಸಿಬ್ಬಂದಿಯನ್ನು ಎಳೆದಾಡಿ ಆಕ್ರೋಶ ಹೊರಹಾಕಿದರು.

ಠೇವಣಿದಾರರಿಗೆ ಸಿಗಲಿಲ್ಲ ಹಣ: ಗ್ರಾಹಕರು ತಮ್ಮ ಉಳಿತಾಯದ ಮತ್ತು ಠೇವಣಿ ಹಣದಲ್ಲಿ 35 ಸಾವಿರ ರೂ . ಮಾತ್ರ ಪಡೆಯಬಹುದು ಎಂದು ಆರ್​ಬಿಐ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ಹಣ ಪಡೆಯಲು ಸೋಮವಾರ ಬೆಳಗ್ಗಿನಿಂದಲೇ ಗ್ರಾಹಕರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತಿದ್ದರು. ಮಧ್ಯಾಹ್ನದ ವೇಳೆಗೆ ಸಾವಿರಾರು ಗ್ರಾಹಕರು ಬ್ಯಾಂಕ್ ಮುಂದೆ ಜಮಾಯಿಸಿದ ನಂತರ ಉಳಿತಾಯ ಖಾತೆದಾರರು ಮಾತ್ರ 35 ಸಾವಿರ ರೂ. ಡ್ರಾ ಮಾಡಬಹುದು. ಠೇವಣಿದಾರರಿಗೆ ಹಣ ಪಡೆಯಲು ಆಗುವುದಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದರು.

ಗ್ರಾಹಕರ ಆಕ್ರೋಶದಿಂದ ಆತಂಕಗೊಂಡಿದ್ದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಅವರ ರಕ್ತದೊತ್ತಡ ಕಡಿಮೆಯಾಗಿ ಪೊಲೀಸರ ರಕ್ಷಣೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದರು. ಅಧ್ಯಕ್ಷರ ಗೈರು, ಸಭೆ ರದ್ದು: ಗ್ರಾಹಕರಿಗೆ ತಮ್ಮ ಹಣ ವಾಪಸ್ ಪಡೆಯಲು ಆರ್​ಬಿಐ ನಿರ್ಬಂಧ ಹೇರಿರುವ ವಿಚಾರ ತಿಳಿದು ಬ್ಯಾಂಕ್​ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದ ಗ್ರಾಹಕರಿಗೆ ಸೋಮವಾರ ಸಮಸ್ಯೆ ಬಗೆಹರಿಸುವುದಾಗಿ ಬ್ಯಾಂಕ್ ಆಡಳಿತ ಮಂಡಳಿ ಭರವಸೆ ನೀಡಿತ್ತು. ಸೋಮವಾರ ಬೆಳಗ್ಗೆ ಆರ್​ಬಿಐ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸಂಜೆ ದ್ವಾರಕಾ ಭವನದಲ್ಲಿ ಸಭೆ ನಡೆಸಲಾಗುವುದು ಎಂದು ಮೊದಲಿಗೆ ಹೇಳಲಾಗಿತ್ತು. ಗ್ರಾಹಕರ ಸಂಖ್ಯೆ ಅಧಿಕವಾಗಿದ್ದ ಹಿನ್ನೆಲೆಯಲ್ಲಿ ರಾಮಕೃಷ್ಣ ಆಶ್ರಮ ವೃತ್ತದ ಬಳಿಯ ಗುರು ನರಸಿಂಹ ಕಲ್ಯಾಣ ಮಂದಿರಕ್ಕೆ ವರ್ಗಾಯಿಸಲಾಗಿತ್ತು.

ಆರ್​ಬಿಐ ಜತೆ ಸಭೆ

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆರ್​ಬಿಐ ಜತೆ ರಾಜ್ಯ ಪಟ್ಟಣ ಬ್ಯಾಂಕ್​ಗಳ ಮಹಾಮಂಡಲದ ಸಭೆ ನಡೆಯಲಿದೆ. ನಿಯಮ ಸಡಿಲಗೊಳಿಸಲು ಮನವಿ ಮಾಡಲಾಗುವುದು ಎಂದು ರಾಜ್ಯ ಪಟ್ಟಣ ಬ್ಯಾಂಕ್​ಗಳ ಮಹಾಮಂಡಲ ನಿರ್ದೇಶಕ ರಮೇಶ್​ಬಾಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net