

ಜಗಳೂರು: ಸತತ ಬರಗಾಲದಿಂದ ಕಂಗೆಟ್ಟ ಜಗಳೂರು ತಾಲೂಕಿನ ರೈತರಿಗೆ ಆಸರೆಯಾಗಲೆಂದು ಸರ್ಕಾರ ಬರ ಪರಿಹಾರ ಮತ್ತು ಬೆಳೆ ವಿಮೆ ಹಣ ಬಿಡುಗಡೆ ಮಾಡಿದೆ. ಬಂದ ಹಣದಿಂದ ಬೀಜ- ಗೊಬ್ಬರಕ್ಕೆ ಮಾಡಿದ ಸಾಲ ತೀರಿಸಬಹುದು ಎಂದು ರೈತರು ಹಿಗ್ಗಿದ್ದರು. ಆದರೆ, ಬ್ಯಾಂಕ್‌ಗಳು ರೈತರ ಅಕೌಂಟ್‌ಗಳಿಗೆ ಜಮಾ ಮಾಡುವುದನ್ನು ಬಿಟ್ಟು ಗಾಯದ ಮೇಲೆ ಬರೆ ಎಳೆದಂತೆ ಸಾಲದ ನೆಪ ಹೇಳಿ ಅಕೌಂಟ್‌ಗಳನ್ನು ಫ್ರೀಜ್ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕಳೆದ ವರ್ಷ ಬರದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆಗಳು ಸಂಪೂರ್ಣ ಕೈಕೊಟ್ಟಿದ್ದವು. ಬರದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರಿಗೆ ವಿಮಾ ಕಂಪನಿಗಳು ಬೆಳೆ ವಿಮೆ ನೀಡಿದರೆ, ಇತ್ತ ಸರ್ಕಾರ ಕೂಡ ಬೆಳೆ ಪರಿಹಾರ ಹಣ ಬಿಡಗಡೆ ಮಾಡಿ ನೆರವಾಗಿದೆ.
ಆದರೆ, ರೈತರ ಖಾತೆಗಳಿಗೆ ಡಿಬಿಟಿ ಆದ ಪರಿಹಾರ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲದ ರೂಪದಲ್ಲಿ ಕಡಿತ ಮಾಡಿಕೊಳ್ಳುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ಅದೇನೆ ಇರಲಿ ಒಂದು ಕಡೆ ಭೀಕರ ಬರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಅನ್ನದಾತರಿಗೆ ಇದೀಗ ಬ್ಯಾಂಕ್ ಅಧಿಕಾರಿಗಳು ಶಾಕ್ ನೀಡುತ್ತಿದ್ದು, ಮುಂದೇನು ಅನ್ನುವ ಚಿಂತೆಯಲ್ಲಿ ರೈತಾಪಿ ವರ್ಗ ಮುಳುಗಿದ್ದಾರೆ. ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅನ್ನೊ ಗಾದೆ ಮಾತಿನಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತ ಮೂಗುದಾರ ಹಾಕಿ ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಬೇಕಾಗಿದೆ.
ದೇವಿಕೆರೆ ಬ್ಯಾಂಕಿನಲ್ಲಿ ರೈತರಿಗೆ ಆತಂಕ: ತಾಲೂಕಿನ ದೇವಿಕೆರೆ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲೂ ರೈತರಿಗೆ ಆತಂಕ ಮನೆ ಮಾಡಿದೆ. ಕಳೆದ ಎರಡು ದಿನಗಳಿಂದಲೂ ಬೆಳೆ ವಿಮೆ ಹಣ ಜಮಾವಾಗಿದ್ದು, ಈ ಭಾಗದ ಹತ್ತಾರು ಗ್ರಾಮಗಳ ರೈತರು ಹಣ ಬಿಡಿಸಿಕೊಳ್ಳಲು ಬ್ಯಾಂಕಿಗೆ ತೆರಳಿದ್ದಾರೆ. ಆದರೆ, ಬ್ಯಾಂಕಿನ ವ್ಯವಸ್ಥಾಪಕ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ ಎಂದು ರೈತರಾದ ತಿಮ್ಮೇಶ್, ಬಸವರಾಜ್ ದೂರಿದರು.
ಈ ಹಿಂದೆ ಪಡೆದಿರುವ ಸಾಲ ಕಟ್ಟದಿದ್ದರೆ ಬೆಳೆವಿಮೆ, ಬೆಳೆ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಲಾಗುವುದು. ಮೊದಲು ಸಾಲಕಟ್ಟಿ ಹಣ ತೆಗೆದುಕೊಂಡು ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ. ಈಗ ಬಿತ್ತನೆ ಕಾಲದಲ್ಲಿ ಸಾಲಕಟ್ಟಿ ಎಂದರೆ ಹೇಗೆ ಸಾಧ್ಯ. ಬೆಳೆ ಬಂದ ಮೇಲೆ ತೀರಿಸಲಾಗುವುದು. ಅಲ್ಲಿಯರೆಗೂ ಅವಕಾಶ ಕೊಡಿ ಎಂದರೂ ಒಪ್ಪಿಕೊಳ್ಳುತ್ತಿಲ್ಲ ಎಂದು ರೈತರು ಅಳಲುತೋಡಿಕೊಂಡರು.
ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನವನ್ನು ರೈತರ ಒಪ್ಪಿಗೆ ಇಲ್ಲದೆ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಸರ್ಕಾರ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಬ್ಯಾಂಕ್‌ಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದರು.