ಸಂಘದ ವ್ಯಾಪ್ತಿ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲು ಚಿಂತನೆ

bank
Published on

ಕುಶಾಲನಗರ:

ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ವ್ಯವಹಾರ ವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.

ಸದ್ಯ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘದ ಚಟುವಟಿಕೆಯನ್ನು ಮುಂದಿನ ಹಂತದಲ್ಲಿ ಮಡಿಕೇರಿ, ಶನಿವಾರಸಂತೆ ಹಾಗೂ ಪಿರಿಯಾಪಟ್ಟಣಗಳಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ವ್ಯಾಪ್ತಿ ಹೆಚ್ಚಿಸಿಕೊಳ್ಳಲಾಗುವುದು. ನಂತರ ಕೊಡಗು ಜಿಲ್ಲಾ ಮಟ್ಟಕ್ಕೆ ಚಟುವಟಿಕೆ ವಿಸ್ತರಿಸಲಾಗುವುದು. ಈ ಬಗ್ಗೆ ಶನಿವಾರ (ಆ.23) ಬೆಳಗ್ಗೆ 11 ಗಂಟೆಗೆ ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯುವ ವಾರ್ಷಿಕ ವಿಶೇಷ ಮಹಾಸಭೆಯಲ್ಲಿ ವಿಷಯ ಮಂಡಿಸಲಾಗುವುದು ಎಂದು ಮಂಗಳವಾರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2004ರಲ್ಲಿ ಆರಂಭವಾದ ಸಂಘ ಯಶಸ್ವಿಯಾಗಿ ನಡೆಯುತ್ತಿದ್ದು 2014-25ನೇ ಸಾಲಿನಲ್ಲಿ 2,02,12,469.63 ರೂ. ನಿವ್ವಳ ಲಾಭಗಳಿಸಿದೆ. 1,404 ಸದಸ್ಯರನ್ನು ಹೊಂದಿದ್ದು, 3.48 ಕೋಟಿ ರೂ. ಪಾಲು ಬಂಡವಾಳ ಸಂಗ್ರಹಿಸಲಾಗಿದೆ. 72.27 ಕೋಟಿ ರೂ. ಮೊತ್ತದ ವಿವಿಧ ರೀತಿಯ ಠೇವಣಿಗಳಿದೆ. 93.10 ಕೋಟಿ ರೂ. ದುಡಿಯುವ ಬಂಡವಾಳ ಇದೆ. ಸಂಘದಲ್ಲಿ 24 ವಿವಿಧ ಬಗೆಯ ಸಾಲಗಳನ್ನು ಕೊಡಲಾಗುತ್ತಿದೆ.

ಸಾಲದ ಗರಿಷ್ಠ ಮಿತಿಯನ್ನು 2.50 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಮುಂದಿನ 4 ವರ್ಷಗಳಲ್ಲಿ ಸಂಘದಿAದ ನೀಡುವ ಸಾಲವನ್ನು 100 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಸಂಘದ ವಸೂಲಾತಿ ಪ್ರಗತಿ ಶೇ 95.37ರಷ್ಟು ದಾಟಿದ್ದು, ಲೆಕ್ಕ ಪರಿಶೋಧನಾ ವರದಿಯಲ್ಲಿ ಎ ಶ್ರೇಣಿ ಲಭ್ಯವಾಗಿದೆ. ಈ ಬಾರಿಯೂ ಕೂಡ ಶೇ.25ರಷ್ಟು ಡಿವಿಡೆಂಡ್‌ನ್ನು ಸದಸ್ಯರಿಗೆ ನೀಡಲಾಗುತ್ತಿದೆ.

ವನಸಿರಿಯಂಥ ಸಾಮಾಜಿಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 11 ಲಕ್ಷ ರೂ. ವೆಚ್ಚದಲ್ಲಿ ಉನ್ನತ ದರ್ಜೆಯ ಗಣಕಯಂತ್ರ ಪ್ರಯೋಗಾಲಯ ಒದಗಿಸಿ ಕೊಡಲಾಗುತ್ತಿದೆ. ಸಂತೆ ವ್ಯಾಪಾರಿ, ಬೀದಿ ಬದಿ ವ್ಯಾಪಾರಿಗಳಿಗೆ ಗರಿಷ್ಠ 1 ಲಕ್ಷ ರೂ. ಜಾಮೀನು ಸಾಲ ಕೊಡಲಾಗುತ್ತಿದೆ. 2029ಕ್ಕೆ ಸಂಘ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ನೆನಪಿಗೆ ಬೆಳ್ಳಿಮಹೋತ್ಸವ ಭವನ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ ಎಂದರು.

ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಡಿ. ಶ್ರೀಜೇಶ್, ವ್ಯವಸ್ಥಾಪಕ ಆರ್. ರಾಜ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net