

ಅರಕೇರಾ: ಬಂಜಾರ ಜನಾಂಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಜನ ಜಾಗೃತಿ ಹಾಗೂ ಜನಾಂದೋಲನ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗೋರಸೇನಾ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ನೆಹರು ಜಾಟೋತ್ ಹೇಳಿದರು.
ಇದನ್ನೂ ಓದಿ: ಬಂಜಾರ ಸಮಾಜದ ಜಾಗೃತಿಗೆ ರಥಯಾತ್ರೆ
ಗೋರ ಬಂಜಾರ ಸಮುದಾಯದ ಹಕ್ಕು, ಪ್ರಗತಿ, ಪರಿವರ್ತನೆಗಾಗಿ ಬೀದರ್‌ನಿಂದ ಬೆಂಗಳೂರುವರೆಗೆ ಹಮ್ಮಿಕೊಂಡಿರುವ ಜನ ಜಾಗೃತಿ ಸೇವಾ ರಥಯಾತ್ರೆಯನ್ನು ಪಟ್ಟಣದಲ್ಲಿ ಶುಕ್ರವಾರ ಸ್ವಾಗತಿಸಿ ಮಾತನಾಡಿದರು. ಒಳ ಮೀಸಲಾತಿ ಪೆಟ್ಟಿನ ಕುರಿತು, ಶೈಕ್ಷಣಿಕ ಪ್ರಾಮುಖ್ಯ, ಬಂಜಾರ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದು.
ಸದ್ಗುರು ಸೇವಾಲಾಲ್ ವಚನಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸಿ, ರಾಷ್ಟ್ರದ ಹಿತ ಕಾಯುವುದು, ಅನ್ಯಾಯದ ವಿರುದ್ಧ ಹೋರಾಟ ಮಾಡಿ, ಭವ್ಯ ಭಾರತ ನಿರ್ಮಾಣ ಮಾಡುವುದೇ ರಥಯಾತ್ರೆಯ ಮುಖ್ಯ ಉದ್ದೇಶ. ಸಮಾಜದ ಜನರು ಗುಳೆ ಹೋಗುವುದರಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜನ ಮೂಢನಂಬಿಕೆಯಿಂದ ಸಂಕಷ್ಟದಲ್ಲಿದ್ದಾರೆ.
ಗೋರ ಬಂಜಾರ ಸಮಾಜದಲ್ಲಿ ಬಡತನ, ಅಜ್ಞಾನ, ಅನಕ್ಷರತೆ, ಇರುವುದರಿಂದ ನಮ್ಮವರು ಯಾರೂ ಸಹ ಸಂಘಟನಾತ್ಮಕವಾಗಿ ಒಂದಾಗುತ್ತಿಲ್ಲ. ಸಮಾಜವನ್ನು ಸಂಘಟಿಸುವುದು, ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದರು.
ಭಾಗ್ಯವಂತಿ ದೇವಸ್ಥಾನದ ಮುಖ್ಯದ್ವಾರದಿಂದ ಮಹಾತ್ಮ ಗಾಂಧಿ ವೃತ್ತದ ಮಾರ್ಗವಾಗಿ ವಾಲ್ಕೀಕಿ ವೃತ್ತದವರೆಗೆ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಿ ಬೀಳ್ಕೊಡಲಾಯಿತು. ಲಂಬಾಣಿ ಸಮಾಜದ ಮಹಿಳೆಯರು ಕಳಸ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮುಖರಾದ ಕೆ.ಅನಂತರಾಜ ನಾಯಕ, ಬಸವರಾಜ ಪೂಜಾರಿ, ಕೆ.ಭಗವಂತ್ರಾಯ ನಾಯಕ, ರಾಕೇಶ ಗೌಡ ಪೊಪಾ, ಶಂಕ್ರಪ್ಪ ಬಂಡೆಗುಡ್ಡ, ಶೇಖರಪ್ಪಗೌಡ ಮಾಪಾ, ಡಾ.ರಾಘವೇಂದ್ರ ವಡಿಗೇರಿ, ಮಹಾಂತೇಶ ಪೂಜಾರಿ, ರಮೇಶ ರಾಠೋಡ, ರಾಜಶೇಖರ ರಾಠೋಡ್, ಶೇಖರಪ್ಪ ಹುಲಕಬಂಡಿ ತಾಂಡಾ, ಪೋಮಣ್ಣ, ಸಂಗಮೇಶ ಚವ್ಹಾಣ್, ಕುಮಾರ ರಾಠೋಡ್, ಬೂದೆಪ್ಪ, ರಾಜು, ರವಿ ಪವಾರ್, ಶಿವರಾಜ ಪವಾರ್, ಶಿವು ಮೊಬೈಲ್, ಗೋವಿಂದ ಚವ್ಹಾಣ್ ಇತರರಿದ್ದರು.