ಬಂಜಾರ ಭಾಷೆ ಮತ್ತು ಸಂಸ್ಕೃತಿ ಪರಿಚಯಿಸುವ ಕಾರ್ಯವಾಗಬೇಕು: ರುದ್ರಪ್ಪ ಲಮಾಣಿ

Banjara academy
Published on

ಬೆಂಗಳೂರು: ಅತ್ಯಂತ ವಿಶಿಷ್ಠತೆಯಿಂದ ಕೂಡಿರುವ ಬಂಜಾರ ಭಾಷೆ ಮತ್ತು ಸಂಸ್ಕೃತಿಯನ್ನು ನಾಡಿನ ಎಲ್ಲಾ ಜನ ಸಮುದಾಯಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾಗಿ ಡಾ. ಎ.ಆರ್. ಗೋವಿಂದ ಸ್ವಾಮಿಯವರು ಅಧಿಕಾರ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಕನ್ನಡ ಭವನಕ್ಕೆ ಸೌಹಾರ್ದಯುತ ಭೇಟಿ ನೀಡಿದ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸ್ಥಾಪನೆ ಮಾಡಿರುವುದು ತುಂಬಾ ಒಳ್ಳೆಯ ಬೆಳವಣಿಗೆ. ಈ ಅಕಾಡೆಮಿ ರಚನಾತ್ಮಕವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಬಂಜಾರ ಭಾಷೆ ಮತ್ತು ಸಂಸ್ಕೃತಿಗೆ ಬಲ ತುಂಬಬೇಕು. ಇದಕ್ಕೆ ಅಗತ್ಯವಾದ ಹೆಚ್ಚಿನ ಅನುದಾನವನ್ನು ಒದಗಿಸಲು ಶಿಾರಸು ಮಾಡುವುದಾಗಿ ಹೇಳಿದರು.

ಬಂಜಾರ ಭಾಷೆ ಮತ್ತು ಸಂಸ್ಕೃತಿ ಅತ್ಯಂತ ವಿಶಿಷ್ಟವಾದದ್ದು. ಇದನ್ನು ನಾಡಿನ ಎಲ್ಲಾ ಜನ ಸಮುದಾಯಗಳಿಗೆ ಪರಿಚಯಿಸಲು ಈ ಅಕಾಡೆಮಿಯ ಮೂಲಕ ಬಂಜಾರ ಸಂಸ್ಕೃತಿಗೆ ಪೂರಕವಾದ ಬಂಜಾರ ಶ್ರದ್ಧಾ ಕೇಂದ್ರಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಬರೆಸಿ ಪ್ರಕಟಿಸಬೇಕು ಹಾಗೂ ಬಂಜಾರ ಸಂಸ್ಕೃತಿಗೆ ಸಂಬಂಧಪಟ್ಟ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು ಪ್ರಸಾರ ಮಾಡುವ ಮೂಲಕ ಬಂಜಾರ ಸಂಸ್ಕೃತಿಯನ್ನು ಜನರಿಗೆ ಪರಿಚಯ ಮಾಡಿಸುವ ನಿಟ್ಟಿನಲ್ಲಿ ಅಕಾಡೆಮಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅಕಾಡೆಮಿಯ ಅಧ್ಯಕ್ಷ ಡಾ. ಎ.ಆರ್. ಗೋವಿಂದ ಸ್ವಾಮಿ ಅವರು, ಅಕಾಡೆಮಿಯ ಸ್ಥಾಪನೆ ಹಾಗೂ ಸಮಿತಿ ರಚನೆ ಕುರಿತಂತೆ ಮಾತನಾಡಿ, ಬಂಜಾರ ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ವಿನಂತಿಸಿದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆ ನಿರ್ದೇಶಕಿ ಡಾ. ಕೆ. ಧರಣಿದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಅಶೋಕ್ ಎನ್. ಚಲವಾದಿ, ಲೆಕ್ಕಾಧಿಕಾರಿ ಬಿ. ಸುರೇಶ್ ನಾಯಕ್, ಅಕಾಡೆಮಿ ರಿಜಿಸ್ಟ್ರಾರ್ ಸೌಭಾಗ್ಯ ಹಾಗೂ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಶ್ರೀಪಾದ್ ಮತ್ತು ಸಮುದಾಯದ ಮುಖಂಡ ರಾಘವೇಂದ್ರ ನಾಯಕ, ಜಯದೇವ ನಾಯಕ, ಡಾ. ಎಂ.ಆರ್. ಚೌವ್ಹಾಣ್ ಮತ್ತು ರಾಜನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net