

ಗಂಗಾವತಿ: ಬಂಜಾರ ಸಮುದಾಯದ ಹಕ್ಕು, ಪ್ರಗತಿ ಮತ್ತು ಪರಿವರ್ತನೆಗಾಗಿ ಜನಜಾಗತಿ ಸೇವಾ ರಥಯಾತ್ರೆ ಆರಂಭವಾಗಲಿದ್ದು, ಮಾ.7ರಂದು ಕೊಪ್ಪಳ ಜಿಲ್ಲೆ ಪ್ರವೇಶಿಸಲಿದೆ ಎಂದು ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣನಾಯ್ಕ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಪತ್ರವನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು. ಗೋರಸೇನಾ ರಾಷ್ಟ್ರೀಯ ಸಂಘಟನೆ ರಾಜ್ಯ ಘಟಕದಿಂದ ಗೋರ ಬಂಜಾರ ಸಮಾಜವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಜನಜಾಗತಿ ಮತ್ತು ಜನಾಂದೋಲನ ರಥಯಾತ್ರೆ ಏರ್ಪಡಿಸಲಾಗಿದೆ. ಬೀದರ್‌ನಿಂದ ಮಾ.4ರಂದು ಆರಂಭವಾಗಲಿದೆ. ಮಾ.10ರಂದು ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ಸಮಾರೋಪಗೊಳ್ಳಲಿದೆ. ಏಳು ದಿನ ರಾಜ್ಯದ 15 ಜಿಲ್ಲೆಗಳನ್ನೊಳಗೊಂಡಂತೆ 1250 ಕಿ.ಮೀ. ರಥಯಾತ್ರೆ ಕೈಗೊಳ್ಳಲಾಗಿದೆ. ಗೋರ ಬಂಜಾರ ಸಮಾಜದ ಜನ ಹೊಟ್ಟೆಪಾಡಿಗೆ ಹೊರರಾಜ್ಯಗಳಿಗೆ ಗುಳೆ ಹೋಗುತ್ತಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮೂಢನಂಬಿಕೆ ಆಚರಣೆಗಳಲ್ಲಿ ತೊಡಗಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿಕೊಳ್ಳುತ್ತಿದ್ದು, ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಗೋರ ಬಂಜಾರರಲ್ಲಿ ಪೂರ್ವದಲ್ಲಿ ವಧುದಕ್ಷಿಣೆ(ದೇಜು) ಕೊಟ್ಟು ಹೆಣ್ಣು ತಂದುಕೊಳ್ಳುತ್ತಿದ್ದವರು. ಈಗ ವರದಕ್ಷಿಣೆಯ ಬಲೆಗೆ ಸಿಲುಕಿದ್ದಾರೆ. ಬಡತನ, ಅಜ್ಞಾನ, ಅನಕ್ಷರತೆಯ ಲಾಭ ಪಡೆಯಲು ಅನೇಕ ಕುತಂತ್ರಿಗಳು ಹವಣಿಸುತ್ತಿದ್ದು ಸಮಾಜವನ್ನು ಮತಾಂತರಕ್ಕೆ ತಳ್ಳುತ್ತಿದ್ದಾರೆ. ಸಂಘಟನೆ ಕಲ್ಪನೆ ರಕ್ತಗತವಾಗಿದ್ದರೂ ಸಹ ಗೋರ ಬಂಜಾರ ಸಮಾಜ ಸಂಘಟನಾತ್ಮಕವಾಗಿ ಒಂದಾಗುತ್ತಿಲ್ಲ. ಸಮಸ್ಯೆಗಳ ಪರಿಹಾರಕ್ಕಾಗಿ ರಥಯಾತ್ರೆ ಕೈಗೊಂಡಿದ್ದು, ಮಾ.7ರಂದು ಕಾರಟಗಿ ಮೂಲಕ ಜಿಲ್ಲೆ ಪ್ರವೇಶಿಸಲಿದೆ. ಸಿದ್ದಾಪುರ, ಶ್ರೀರಾಮನಗರ ಮತ್ತು ಗಂಗಾವತಿಯಲ್ಲಿ ಸಮಾವೇಶಗೊಂಡ ನಂತರ ವಿಜಯನಗರ ಜಿಲ್ಲೆಗೆ ಬೀಳ್ಕೋಡಲಾಗುವುದು ಎಂದರು.
ಸಮಾಜದ ಮುಖಂಡರಾದ ರವಿ ಚವ್ಹಾಣ, ಕೃಷ್ಣನಾಯ್ಕ, ವೆಂಕಟೇಶ, ಶಿವಪ್ಪ ಜಾಗೋಗೋರ್, ಪಾಂಡುನಾಯ್ಕ, ಸುರೇಶ ನಾಯ್ಕ, ಅಮರೇಶ ಚವ್ಹಾಣ ಇತರರಿದ್ದರು.