

ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದ ಬಂಜಾರಾ ಭವನದಲ್ಲಿ 18ನೇ ವರ್ಷದ ದಸರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಅಮಾವಾಸ್ಯೆ ಮಾರನೇ ದಿನ ಘಟಸ್ಥಾಪನೆ ಹಾಗೂ ತೀಜ ಹಾಕಿ ಸತತ 10 ದಿನ ದೀಪ ಬೆಳಗುವಂತೆ ಮಾಡಿ ದೇವಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.
ಬುಧವಾರ ಬಂಜಾರಾ ಕುಲಗುರು ಸಂತ ಶ್ರೀಸೇವಾಲಾಲ್ ಮಹಾರಾಜರ ಮಹಾ ಭೋಗ್ ಕಾರ್ಯಕ್ರಮ ನೆರವೇರಿಸಲಾಯಿತು.
ಶ್ರೀಸೇವಾಲಾಲ್ ಮಹಾರಾಜರಿಗೆ ಬಿಳಿ ಧ್ವಜ (ಖಾಟಿ) ಹಾಗೂ ಶ್ರೀ ಮಾರಿಕಾಂಬಾ ದೇವಿಗೆ ಕೆಂಪು ಧ್ವಜ (ಖಾಟಿ) ಅರ್ಪಿಸಲಾಯಿತು. ನಂತರ ದೇವಿಯ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.
ಸಾವಿರಾರು ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು. ಭಕ್ತರಿಗಾಗಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಗುರುವಾರ ಬೆಳಗ್ಗೆ ದೇವಿಯ ಪ್ರಾರ್ಥನೆ ಆರತಿ ಕಾರ್ಯಕ್ರಮ ನಡೆಯಿತು. ಕಳೆದ 10 ದಿನಗಳಿಂದ ಸತತವಾಗಿ ಪೂಜಿಸಿದ ಘಟ್ಟ ಸ್ಥಾಪನಾ ತೀಜ ಸಸಿಗಳನ್ನು ವಿಜಯದಶಮಿಯಂದು ಪೂಜಿಸಿ ವಿಸರ್ಜನೆ ಮಾಡಲಾಯಿತು.
ಪ್ರತಿದಿನ ತೀಜ ಸಸಿಗಳಿಗೆ ನಿರುಣಿಸುವುದು ಮತ್ತು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುವುದು. ಬನ್ನಿ ಹಬ್ಬದಲ್ಲಿ ಪರಸ್ಪರರಿಗೆ ತೀಜ ಹಂಚಿಕೊಂಡು ಬಾಳು ಯಾವತ್ತು ಹಸಿರಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾಡು ಹಾಡುತ್ತಾ ಲಂಬಾಣಿ ವಿಶೇಷ ನೃತ್ಯ ಪ್ರದರ್ಶನ ಮಾಡಲಾಯಿತು.
ಗೋಧಿ ಹಬ್ಬದ ಮೂಲಕ ಭೂಮಾತೆಯ ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು. ವೆಂಕಟೇಶ ಪಮ್ಮಾರ, ಉಮೇಶ ಲಮಾಣಿ, ಭೀಮಸಿಂಗ ಲಮಾಣಿ, ಸುನಂದಾ ಲಮಾಣಿ ದೇವಸ್ಥಾನ ಅರ್ಚಕರು, ಶ್ರೀದೇವಿ ಲಮಾಣಿ, ಶ್ವೇತಾ, ಭಾರತಿ, ಗೋವಿಂದ ಪಮ್ಮಾರ ಹಾಗೂ ಇತರರು ಕಾರ್ಯಕ್ರಮ ಸಂಘಟಿಸಿದ್ದರು.
ಹಬ್ಬದ ಮೂಲಕ ಯುವ ಪೀಳಿಗೆಗೆ ಮೂಲ ಸಂಸ್ಕೃತಿ, ಭಾಷೆ, ಭಕ್ತಿಭಾವ ಮತ್ತು ಸಾಮಾಜಿಕ ಅರಿವು ಬರುವಂತಾಗಲಿ, ಇಂಥ ಹಬ್ಬಗಳನ್ನು ಆಚರಿಸುವುದು ಹೊಸ ತಳಹದಿಗೆ ಸಂಸ್ಕೃತಿಯ ಸೇತುವೆಯಾಗಲಿದೆ. ಬಂಜಾರಾ ವಿಶಿಷ್ಟ ಹಬ್ಬ ನಮ್ಮ ಕಲೆ, ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸುತ್ತದೆ ಎಂದು ಸಮಾಜದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಹೇಳಿದರು.
ಡಾ. ಭೋಜು ಪೂಜಾರ, ರಾಜೀವ ರಾಠೋಡ, ವಿಷ್ಣು ರಾಠೋಡ, ಚಂದ್ರಶೇಖರ ನಾಯಕ, ಹಾಮೇಶ ನಾಯಕ, ಶ್ರೀಕಾಂತ ಚವಾಣ ಮುಂತಾದವರು ಭಾಗವಹಿಸಿದ್ದರು.