ಬಸವಾಪುರ ರಾಜ್ಯಕ್ಕೆ ಮಾದರಿ ಗ್ರಾಮ

22 jlr
Published on

ಜಗಳೂರು: ಸರ್ಕಾರದ ಯಾವುದೇ ಅನುದಾನದ ನಿರೀಕ್ಷೆ ಮಾಡದೇ ಉದ್ಯೋಗ ಖಾತ್ರಿ ಅನುದಾನ ಬಳಸಿಕೊಂಡು ಬಸವಾಪುರವನ್ನು ಅಭಿವೃದ್ಧಿ ಮಾಡಿ ರಾಜ್ಯಕ್ಕೆ ಮಾದರಿ ಗ್ರಾಮವಾಗಿದೆ ಎಂದು ಬಂಜಾರ ನಿಗಮದ ಅಧ್ಯಕ್ಷ ಜಯದೇವನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಬಸವಾಪುರ ಗ್ರಾಮದ ತಾಂಡಾದಲ್ಲಿ ಶುಕ್ರವಾರ ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡಿರುವ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ 2005ರಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿ ಮಾಡಿ ಲಕ್ಷಾಂತರ ಬಡ ಕುಟುಂಬಗಳಿಗೆ ಹಸಿವು ನೀಗಿಸಿ, ಸೂರು ಕಲ್ಪಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಲ ಕ್ರಮೇಣ ಯೋಜನೆ ವೇಗ ಕಡಿಮೆಯಾಗಿದ್ದು, ಅವರ ಹಲವು ನೀತಿ, ನಿಯಮಗಳಿಂದ ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ. ಆದರೆ ಗ್ರಾಪಂ ಸದಸ್ಯ ರವಿಚಂದ್ರ ಅವರು ಸಚಿವರು ಮತ್ತು ಶಾಸಕರ ಸಹಕಾರದಿಂದ ಗ್ರಾಮದಲ್ಲಿ ನರೇಗಾದಡಿ ಸಿಸಿ ರಸ್ತೆ, ಚರಂಡಿಗಳನ್ನು ನಿರ್ವಿುಸಿರುವುದು ಶ್ಲಾಘನೀಯ ಎಂದರು.

ಉದ್ಯೋಗ ಖಾತ್ರಿ ಕೇವಲ ಕೆರೆ, ಗೋ ಕಟ್ಟೆ ಹೂಳು ತೆಗೆಯುವುದಕ್ಕೆ ಸೀಮಿತವಾಗದೆ ಗ್ರಾಮಗಳಲ್ಲಿ ರಸ್ತೆ, ಚರಂಡಿ, ನೀರಿನ ತೊಟ್ಟಿ ಸೇರಿ ರೈತರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಬಸವಾಪುರ ರವಿಚಂದ್ರ ಮಾತನಾಡಿ, ನರೇಗಾದಡಿ ಕೊಡದಗುಡ್ಡ ವೀರಭದ್ರೇಶ್ವರ ದೇವಸ್ಥಾನ ಆವರಣವನ್ನು ಸಿಸಿ ರಸ್ತೆ ಮಾಡಿದ್ದರಿಂದ ಜಾತ್ರೆಯಲ್ಲಿ ಭಕ್ತರಿಗೆ ಅನುಕೂಲವಾಗುತ್ತದೆ. ಹಾಗೆಯೇ ಬಸಾಪುರದ ಪ್ರತಿಯೊಂದು ಬೀದಿಯನ್ನು ರಸ್ತೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಚಿವರು, ಶಾಸಕರ ಸಲಹೆಯಂತೆ ತಾಂಡಾದಲ್ಲಿ ಸುಮಾರು 1.28 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಬಾಕ್ಸ್ ಚರಂಡಿಯನ್ನು ಮಾಡಲಾಗಿದೆ ಎಂದು ಹೇಳಿದರು.

ಗ್ರಾಮಸ್ಥರ ಮೆಚ್ಚುಗೆ: ನಿಗಮದ ಅಧ್ಯಕ್ಷ ಜಯದೇವನಾಯ್ಕ ತಾಂಡಾಕ್ಕೆ ಭೇಟಿ ನೀಡಿದಾಗ ಗ್ರಾಪಂ ಸದಸ್ಯ ರವಿಚಂದ್ರ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಂಡಾದ ಅಭಿವೃದ್ಧಿಗೆ ಹಾಗೂ ಗ್ರಾಮದ ಸಮಸ್ಯೆಗೆ ಸ್ಪಂದಿಸುತ್ತಾರೆ. ಕೆಸರಿನಿಂದ ತುಂಬಿರುತ್ತಿದ್ದ ರಸ್ತೆಗಳು ಈಗ ಸಿಸಿ ರಸ್ತೆಗಳಾಗಿವೆ ಎಂದು ಲಲಿತಾಬಾಯಿ, ಆಶಾಬಾಯಿ, ಲಕ್ಷ್ಮೀಬಾಯಿ ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net