ಜಾತಿಗಣತಿ ಆಧರಿಸಿ ವೈಜ್ಞಾನಿಕವಾಗಿ ಮೀಸಲು ಕಲ್ಪಿಸಿ, ಸರ್ಕಾರಕ್ಕೆ ಬಂಜಾರಾ ಸಮುದಾಯ ಆಗ್ರಹ

BANJARA PRESS MEET MEEASALATI
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಬಂಜಾರಾ, ಕೊರಮ, ಭಜಂತ್ರಿ ಮತ್ತಿತರ ಸಮುದಾಯಗಳ ಮುಖಂಡರು ಜಂಟಿ ಸುದ್ದಿಗೋಷ್ಠೀ ನಡೆಸಿದರು. ಸುರೇಶ ಚವಾಣ್, ಪ್ರಕಾಶ ಚವಾಣ್, ಮಹಾರಾಜ್ ಗೋಪಾಲ್ ನಾಯಕ ಮತ್ತಿತರರಿದ್ದಾರೆ.
Published on

ವಿಜಯಪುರ: ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಸದಾಶಿವ ಆಯೋಗ ನೀಡಿದ ವರದಿಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಬಂಜಾರಾ, ಕೊರಮ, ಭಜಂತ್ರಿ ಮತ್ತಿತರ ಸಮುದಾಯಗಳ ಮುಖಂಡರು ಆಗ್ರಹಿಸಿದರು.

ನ್ಯಾ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಇದರಿಂದ ಶೋಷಿತ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ ಜಾತಿ ಗಣತಿ ನಡೆಯಲಿದೆ. ಆ ಪ್ರಕಾರ ಹೊಸದಾಗಿ ಅಧ್ಯಯನ ನಡೆಸಿ ಹೊಸ ವರದಿಯನ್ನಾಧರಿಸಿ ವೈಜ್ಞಾನಿಕವಾಗಿ ಒಳಮೀಸಲಾತಿ ಕಲ್ಪಿಸಬೇಕೆಂದು ರಾಷ್ಟ್ರೀಯ ಬಂಜಾರ ಪರಿಷತ್ ರಾಜ್ಯಾಧ್ಯಕ್ಷ ಪ್ರಕಾಶ ಚವಾಣ್ ಮತ್ತು ಸೇವಾಲಾಲ್ ಸೇನೆ ಜಿಲ್ಲಾಧ್ಯಕ್ಷ ಸುರೇಶ ಚವಾಣ್ ಮತ್ತಿತರ ನಾಯಕರು ಶನಿವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು.

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು 101 ತಳ ಸಮುದಾಯಗಳಿಗೆ ಮೀಸಲಾತಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ, ಈಗ ಕಾಂಗ್ರೆಸ್, ಬಿಜೆಪಿ ಸೇರಿ ತಮ್ಮ ರಾಜಕೀಯ ಲಾಭಕ್ಕಾಗಿ ಒಳ ಮೀಸಲಾತಿ ಹೆಸರಲ್ಲಿ ಸಮುದಾಯಗಳಲ್ಲಿ ಒಡುಕು ಮೂಡಿಸುವ ಕೆಲಸ ಮಾಡುತ್ತಿವೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಮೀಸಲಾತಿಯನ್ನು ಎಲ್ಲ ವರ್ಗಗಳಿಗೆ ಒದಗಿಸಬೇಕು ಎಂದರು.

ನ್ಯಾ.ಸದಾಶಿವ ಆಯೋಗವು ಕೇವಲ ಒಂದೇ ಜಾತಿಗೆ ಅನುಕೂಲವಾಗುವ ರೀತಿಯಲ್ಲಿ ವರದಿ ತಯಾರಿಸಿದೆ. ಹೀಗಾಗಿ ನ್ಯಾ.ಕಾಂತರಾಜು ಮತ್ತು ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಗಳು ಹೊಸ ಜಾತಿ ಗಣತಿ ಪ್ರಕಾರ ಒಳಮೀಸಲಾತಿ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿವೆ ಎಂದು ಸುರೇಶ ಚವಾಣ್ ತಿಳಿಸಿದರು.

ಈ ಹಿಂದೆ ಬಿಜೆಪಿ ಒಳಮೀಸಲಾತಿ ವಿಚಾರದಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳಲು ಮುಂದಾದಾಗ ಬಿಜೆಪಿ ಹಠಾವೋ ತಾಂಡಾ, ಹಟ್ಟಿ, ಕೇರಿ ಬಚಾವೋ ಆಂದೋಲನ ಕೈಗೊಳ್ಳಲಾಗಿತ್ತು. ಆಗ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಬಂಜಾರಾ, ಭಜಂತ್ರಿ, ಕೊರಮ ಮತ್ತಿತರ ಸಮುದಾಯಗಳಿಗೆ ಅನ್ಯಾಯ ಮಾಡಲ್ಲ ಎಂದ ಕಾರಣಕ್ಕೆ ಕಾಂಗ್ರೆಸ್‌ಗೆ ಮತ ಹಾಕಲಾಯಿತು. ಇದೀಗ ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ಒಳಮೀಸಲಾತಿ ಜಾರಿಗೆ ಮುಂದಾಗಿದ್ದು, ಇನ್ಮುಂದೆ ಕಾಂಗ್ರೆಸ್ ಹಠಾವೋ ಆಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊರಮ ಸಮುದಾಯದ ಮುಖಂಡ ರವೀಂದ್ರ ಜಾಧವ ಮಾತನಾಡಿ, ಓಟ್ ಬ್ಯಾಂಕ್‌ಗಾಗಿ ಸಂವಿಧಾನ ವಿರೋಧಿ ಕೃತ್ಯ ಎಸಗುತ್ತಿದ್ದು, ಅದಕ್ಕೆ ತಮ್ಮ ವಿರೋಧವಿದೆ. ಜೇನುಗೂಡಿಗೆ ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದೀರಿ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಮುಖಂಡರಾದ ಮಹಾರಾಜ್ ಗೋಪಾಲ್ ನಾಯಕ, ಚಂದ್ರಶೇಖರ ರಾಠೋಡ, ರವಿ ಲಮಾಣಿ, ರಾಜಶೇಖರ ಭಜಂತ್ರಿ, ಅಪ್ಪಾಸಾಹೇಬ ರಾಠೋಡ, ಕಿರಣ ನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net