

ಹುಬ್ಬಳ್ಳಿ: ರಾಜ್ಯದಲ್ಲಿ ಬಂಜಾರ, ಲಂಬಾಣಿ ಸೇರಿ ವಿವಿಧ ಹೆಸರಿನಿಂದ ಕರೆಯಲ್ಪಡುವ ಸಮುದಾಯದ ಕಲೆ, ಸಂಸ್ಕೃತಿ ಅದ್ಭುತವಾದದ್ದು, ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ. ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಇದಕ್ಕೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.
ಇಲ್ಲಿಯ ನವನಗರದ ಧಾರವಾಡ ಜಿಲ್ಲಾ ಬಂಜಾರ ಭವನದಲ್ಲಿ ಶನಿವಾರ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾತ್ಮ ಬಸವೇಶ್ವರ, ಡಾ. ಅಂಬೇಡ್ಕರ್ ಅವರಂತೆ ಸಂತ ಸೇವಾಲಾಲ್ ಅವರು ಸಮುದಾಯದಲ್ಲಿ ಬದಲಾವಣೆ ತಂದ ಮಹಾನ್ ವ್ಯಕ್ತಿ. ಅವರ ಮಾರ್ಗದಲ್ಲಿ ಸಮಾಜ ನಡೆಯಬೇಕು. ರಾಜ್ಯ ಭಾಷೆ ಕನ್ನಡವಾದರೂ ಸಮುದಾಯದ ಆಡುಭಾಷೆ ಲಂಬಾಣಿ, ಮಾತೃಭಾಷೆ ಹಾಗೂ ಮನೆ ಭಾಷೆಗಳ ಬಗ್ಗೆ ಗೌರವ ಹೊಂದಿರಬೇಕು ಎಂದರು.
ಬಂಜಾರ ಸಮಾಜಕ್ಕೆ ಅದರದೇ ಆದ ಕಲೆ, ಸಂಸ್ಕೃತಿ ಇದೆ. ಅದನ್ನು ಉಳಿಸಿಕೊಂಡು ಹೋಗಬೇಕು. ಆಧುನಿಕ ಯುಗದಲ್ಲಿ ಕೌಶಲವನ್ನು ಬೆಳೆಸಿಕೊಳ್ಳಲು ಯುವಕರು ಮುಂದೆ ಬರಬೇಕು. ಜಾಗತೀಕರಣದಿಂದಾಗಿ ಬಹಳಷ್ಟು ಸಮಾಜಗಳು ತಮ್ಮತನ ಉಳಿಸಿಕೊಳ್ಳಲು ಪರದಾಡುತ್ತಿವೆ. ಈ ದಿಸೆಯಲ್ಲಿ ಬಂಜಾರರು ಉತ್ತಮ ಹೆಜ್ಜೆ ಇಟ್ಟಿದ್ದಾರೆ. ಸಾಹಿತ್ಯ ಪರಿಷತ್ ಇದಕ್ಕೆ ಅನುಕೂಲ ಒದಗಿಸಲಿದೆ ಎಂದರು.
ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲ:
ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯಕ ಮಾತನಾಡಿ, ರಾಜ್ಯದಲ್ಲಿ ಸುಮಾರು 35 ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜದ ಒಬ್ಬರೂ ಸಚಿವ ಸಂಪುಟದಲ್ಲಿ ಇಲ್ಲ. ಪ್ರಾತಿನಿಧ್ಯ ಸಿಗದಿರುವುದು ದುರ್ದೈವದ ಸಂಗತಿ. ಸಮಾಜದಲ್ಲಿ ಸಂಘಟನೆ, ಒಗ್ಗಟ್ಟು ಇಲ್ಲದಿರುವುದು, ನಾಯಕತ್ವದ ಕೊರತೆ ಇದಕ್ಕೆ ಕಾರಣ ಎಂದರು.
ಮಾಜಿ ಸಚಿವೆ, ಸಾಹಿತಿ ಬಿ.ಟಿ. ಲಲಿತಾ ನಾಯಕ ಮಾತನಾಡಿ, ಸಮಾಜದ ಜನರು ಶಿಕ್ಷಣ ಪಡೆಯಬೇಕು. ಒಳ್ಳೆಯ ಉದ್ಯೋಗಗಳನ್ನು ಮಾಡಬೇಕು. ಸಮಾಜದಲ್ಲಿ ಬೇರೂರಿರುವ ಮೌಢ್ಯಗಳಿಂದ ಹಲವು ಅನಾಹುತಗಳು ಆಗುತ್ತಿವೆ. ಸಾಹಿತ್ಯವು ಇದನ್ನೆಲ್ಲ ಹೊರಗೆ ತರಬೇಕು. ಜನರನ್ನು ಜಾಗೃತಗೊಳಿಸಬೇಕು ಎಂದರು.
ಆಂಸು, ಉಟೊ ಗೋರ್ ರಾಜ್ ಕರಣು, ಕೋವಲೆರ ಕಡಿ, ಜಣಿ ಯಾಡಿರೋ ವಾಲೋವೀರ, ಬಂಜಾರ ಆಧ್ಯಾತ್ಮಿಕ, ಸಂಸ್ಕೃತಿ ಮತ್ತು ಇತಿಹಾಸ ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಪಿ. ರಾಜೀವ, ಮನೋಹರ ಐನಾಪೂರ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್. ಜಯದೇವ ನಾಯ್ಕ, ಪಾಂಡುರಂಗ ಪಮ್ಮಾರ, ಶಾಂತಾ ನಾಯ್ಕ, ಇಂದುಮತಿ ಲಮಾಣಿ, ಡಾ. ಡಿ.ಬಿ. ನಾಯಕ, ಎನ್. ಅನಂತನಾಯಕ, ರಾಘವೇಂದ್ರ ನಾಯ್ಕ, ಶರಣಗೌಡ ಪಾಟೀಲ ಇತರರು ಪಾಲ್ಗೊಂಡಿದ್ದರು.
ಸರಿಗಮಪ ಖ್ಯಾತಿಯ ರಮೇಶ ಲಮಾಣಿ ಪ್ರಾರ್ಥನೆ ಹಾಡಿದರು. ಬಂಜಾರ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಕಾಂತ ಜಾಧವ ಸ್ವಾಗತಿಸಿದರು. ಗೌರವಾಧ್ಯಕ್ಷ ಪ್ರೊ. ಪಿ.ಕೆ. ಖಂಡೋಬಾ ಪ್ರಾಸ್ತಾವಿಕ ಮಾತನಾಡಿದರು.