

ಮಂಗಳೂರು: ಹಿನ್ನೆಲೆಯಲ್ಲಿ ಕೇಪುಳ ಹೂವಿನ ಕೆಂಬಣ್ಣ, ಅದರ ಮೇಲೆ ಬಿಳಿಯ ಬಣ್ಣದಲ್ಲಿ ಸೂರ್ಯ- ಚಂದ್ರರಿರುವ ಚಿತ್ರಗಳು ತುಳುನಾಡಿನಲ್ಲಿ ಆರಾಧನೆಯ ಸ್ಥಾನ ಪಡೆದಿವೆ. ಅನಾದಿ ಕಾಲದಿಂದಲೂ ಭೂತಾರಾಧನೆ, ಜಾತ್ರೆ ಸಂದರ್ಭ ಬಳಕೆಯಲ್ಲಿದ್ದು, ಇದನ್ನೇ ತುಳುನಾಡಿನ ಧ್ವಜ ಎಂದು ಗೌರವಿಸಲಾಗುತ್ತಿದೆ. ಈ ಧ್ವಜಕ್ಕೆ ಅವಮಾನ ಮಾಡಿದ ಬೆಂಗಳೂರಿನ ಯುವಕನೋರ್ವ ಇದೀಗ ಕ್ಷಮೆ ಯಾಚಿಸಿದ್ದಾನೆ.
ಮೂರು ದಿನಗಳ ಹಿಂದೆ ‘ಚರ್ಮುರಿ’ ಎನ್ನುವ ಟ್ರೋಲ್‌ಪೇಜ್‌ನ ಪೋಸ್ಟ್‌ಗೆ ಬೆಂಗಳೂರಿನ ಸೂರ್ಯ ಎನ್.ಕೆ. ಎಂಬಾತ ಕಮೆಂಟ್ ಮಾಡಿದ್ದ. ಈ ಸಂದರ್ಭ, ಹವಾಯಿ ಚಪ್ಪಲಿಗೆ ತುಳುನಾಡಿನ ಧ್ವಜದ ಚಿತ್ರವನ್ನು ಎಡಿಟ್ ಮಾಡಿ ಹಾಕಿ, ‘ಇವತ್ತು ತುಳುನಾಡ್ ಚಪ್ಪಲ್ ಬಂದಿದೆ, ನಾಳೆ ಬಿಕಿನಿಯೂ ಬರಬಹುದು, ಹಾಕಿಕೊಂಡು ಮಜಾ ಮಾಡಿ’ ಎಂದು ಬರೆದಿದ್ದ. ಇದಕ್ಕೆ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಇದೇ ವಿಚಾರವಾಗಿ ಬುಧವಾರ ಸ್ಥಳೀಯ ವಾಹಿನಿಯಲ್ಲಿ ಲೈವ್ ಚರ್ಚೆ ಆಯೋಜಿಸಲಾಗಿತ್ತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಯುವ ತುಳುನಾಡ್ ಸಂಘಟನೆ ಅಧ್ಯಕ್ಷ ರೋಷನ್ ರೆನಾಲ್ಡ್ ಮತ್ತು ಹಿಂದು ಸಂಘಟನೆ ಮುಖಂಡ ಕುಮಾರ್ ಮಾಲೆಮಾರ್ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಕರೆ ಮಾಡಿದ ಸೂರ್ಯ, ನಾನು ಮಾಡಿರುವುದು ತಪ್ಪೆಂಬ ಅರಿವಾಗಿದೆ, ಮುಂದೆ ಹೀಗೆ ಮಾಡುವುದಿಲ್ಲ. ಕೃತ್ಯಕ್ಕಾಗಿ ಸಮಸ್ತ ತುಳು ಜನರಲ್ಲಿ ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದಾನೆ.
ತುಳುವರು ಭಾಷೆ, ದೈವ ದೇವರಿಗೆ ಅವಮಾನ ಆದಾಗ ಸೆಟೆದು ನಿಲ್ಲುತ್ತಾರೆ. ಇಂಥ ವಿಕೃತಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸುವುದಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ದಯಾನಂದ ಕತ್ತಲ್‌ಸಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ