

ಮಳವಳ್ಳಿ : ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಸ್ವರ್ಣಗೌರಿ ಪೂಜೆಯನ್ನು ಬುಧವಾರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಯಿತು.
ಪಟ್ಟಣದ ಪೇಟೆಬೀದಿಯಲ್ಲಿ ಗಂಗೆ-ಗೌರಿ ಇಬ್ಬರನ್ನೂ ಪೂಜಿಸುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಲಾಯಿತು. ಇವೀರಶೈವ ಸಮಾಜದವರು ಗಂಗೆ-ಗೌರಿ ಪೂಜೆ ಸಲ್ಲಿಸಿದರು. ಪಟ್ಟಣದ ಪಟ್ಟಲದಮ್ಮ ದೇವಸ್ಥಾನದ ಸಮೀಪದಲ್ಲಿರುವ ದೊಡ್ಡಕೆರೆಯಲ್ಲಿ ಗೌರಿ ಮೂರ್ತಿಗಳನ್ನು ತಯಾರಿಸಿ ಪೂಜೆ ಸಲ್ಲಿಸಲಾಯಿತು. ಎರಡು ಪ್ರತ್ಯೇಕ ಸಾರೋಟಿನಲ್ಲಿ ಗಂಗೆ-ಗೌರಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅರಿಶಿಣ-ಕುಂಕುಮ ಹಾಗೂ ಹೂವಿನಿಂದ ಅಲಕೃತಗೊಳಿಸಿದ ನಂತರ ಭಕ್ತರು ಸಾರೋಟುಗಳನ್ನು ಎಳೆದುಕೊಂಡು ಮೆರವಣಿಗೆ ಮೂಲಕ ತೆರಳಿದರು. ಮಂಗಳವಾದ್ಯದೊಡನೆ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಸಾಗಿದ ಮನೆ-ಮನೆಗಳ ಬಳಿಯಲ್ಲೂ ಗೃಹಿಣಿಯರು ಗಂಗ-ಗೌರಿಗೆ ಬಾಗಿನ ನೀಡಿ ಪೂಜೆ ಸಲ್ಲಿಸಿದರು. ನಂತರ ಪೇಟೆ ಬೀದಿಯಲ್ಲಿರುವ ಗೌರಿಗುಡಿಯಲ್ಲಿ ಗಂಗೆ-ಗೌರಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಇಲ್ಲಿನ ಗುಡಿಯಲ್ಲಿ ಹತ್ತು ದಿನಗಳ ಕಾಲ ಪೂಜಾ ಕೈಂಕರ್ಯಗಳು ಜರುಗಲಿದ್ದು, 11ನೇ ದಿನಕ್ಕೆ ಕಡಲೆ ಬೇಳೆ ಕುಟ್ಟಿದ ಪುಡಿಯಿಂದ ಗೌರಿ ಮೂರ್ತಿಯನ್ನು ತಿದ್ದಿ ವಿಶೇಷ ಪೂಜೆ ಸಲ್ಲಿಸಿದ ನಂತರ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುತ್ತದೆ.
ಮಂಟೇಸ್ವಾಮಿ ಮಠ: ತಾಲೂಕಿನ ಬಿ.ಜಿ.ಪುರದಲ್ಲಿರುವ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದಲ್ಲಿ ಪೀಠಾಧ್ಯಕ್ಷರ ಕುಟುಂಬದವರು ವಿಶೇವಾಗಿ ಗೌರಿಹಬ್ಬವನ್ನು ಆಚರಿಸಿದರು. ಮಠದ ಆವರಣದ ತೊಟ್ಟಿಯೊಂದರಲ್ಲಿ ಬಣ್ಣದ ಬಳೆ ಹಾಗೂ ವಿವಿಧ ವಸ್ತುಗಳ ಜತೆಗೆ ಮಣ್ಣು ಮಿಶ್ರಣ ಮಾಡಲಾಗುತ್ತದೆ. ಮಠದ ಜ್ಯೋತಿಷಿಯೊಬ್ಬರು ಹಬ್ಬದ ದಿನದಂದು ತೊಟ್ಟಿಯಲ್ಲಿ ಮುಳುಗಿ ಕೈಸೆರೆಯ ಮಣ್ಣಿನಲ್ಲಿ ಸಿಗುವ ವಸ್ತುಗಳನ್ನು ಮೇಲೆತ್ತುತ್ತಾರೆ. ಸಿಗುವ ವಸ್ತುಗಳನ್ನು ಗುರುತಿಸಿ ಅದರ ಮೇಲೆ ಗೌರಿ ಬಂದಳು ಎಂದು ವರ್ಷದ ಶುಭ-ಅಶುಭಗಳ ಬಗ್ಗೆ ಭವಿಷ್ಯ ಹೇಳುವುದು ಪ್ರತೀತಿಯಾಗಿದ್ದು, ಮಂಗಳವಾರ ನಡೆದ ವಿದಿವಿಧಾನದಲ್ಲಿ ಬಳೆ ಮತ್ತು ಬಿಚ್ಚೋಲೆ ದೊರೆತ ಹಿನ್ನೆಲೆಯಲ್ಲಿ ಶುಭ ಸೂಚನೆಯಾಗಿದೆ ಎಂದು ಪೀಠಾಧ್ಯಕ್ಷ ಶ್ರೀ ಜ್ಞಾನಾನಂದ ಚನ್ನರಾಜೇ ಅರಸು ಅವರು ಭವಿಷ್ಯವಾಣಿಯನ್ನು ವಿಜಯವಾಣಿಗೆ ತಿಳಿಸಿದ್ದಾರೆ.
ಪೂಜಾ ಕಾರ್ಯಗಳನ್ನು ಮುಗಿಸಿ ಗೌರಿ ಮೂರ್ತಿಯನ್ನು ಪಲ್ಲಕ್ಕಿ ಸಾರೋಟಿನಲ್ಲಿರಿಸಿ ಗ್ರಾಮದ ರಾಜಬೀದಿಯಲ್ಲಿ ಮೆರವಣಿಯ ನಂತರ ಮಠದ ಆವರಣದಲ್ಲಿರುವ ಗೌರಿ ಅಜಾರದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಯುವಕರು ಗಣೇಶ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಂಡಿದ್ದರು.