ಜಿಲ್ಲೆಯ ಹಲವೆಡೆ ಬಿರುಸಿನ ಮಳೆ

rural rain
Published on

ನಗರ, ಪಟ್ಟಣ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ವಾರದಿಂದ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆರಾಯ ಸೋಮವಾರ ಕೃಪೆ ತೋರಿದ್ದಾನೆ. ಬೆಳಗ್ಗಿನಿಂದಲೂ ಮೋಡಮುಸುಕಿದ್ದ ವಾತಾವರಣವಿತ್ತು. ಮಧ್ಯಾಹ್ನ ತುಂತುರಿನೊಂದಿಗೆ ಆರಂಭವಾಗಿ ಕೆಲಕಾಲ ಜೋರು ಮಳೆಯಾಗಿದೆ.
ನೆರೆಯ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದೆ. ವಾರದಿಂದ ಅಲ್ಲಲ್ಲಿ ಚೆದುರಿದಂತೆ ತುಂತುರು ಮಳೆಯಾಗಿತ್ತು. ಆದರೆ ಸೋಮವಾರ ಕೆಲಕಾಲ ಭಾರಿ ಮಳೆ ಸುರಿದಿದ್ದು, ವಾತಾವರಣವನ್ನು ತಂಪಾಗಿಸಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಹೋಲಿಸಿದರೆ ದೊಡ್ಡಬಳ್ಳಾಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದೆ, ನೆಲಮಂಗಲ ಭಾಗದಲ್ಲಿ ಮುಂಜಾನೆಯಿಂದಲೂ ಮೋಡಮುಸುಗಿದ ವಾತಾವರಣ ಕಂಡುಬಂದಿತಾದರೂ ಜೋರು ಮಳೆಯಾಗಿಲ್ಲ. ಉಳಿದಂತೆ ದೇವನಹಳ್ಳಿ ಪಟ್ಟಣ ಸೇರಿ ಕುಂದಾಣ ಮತ್ತಿತರ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಹೊಸಕೋಟೆಯಲ್ಲಿ ನಗರದಲ್ಲಿ ಸಾಧಾರಣ ಮಳೆಯಾಗಿದ್ದರೆ ನಂದಗುಡಿ, ಜಡಿಗೇನಹಳ್ಳಿ ಭಾಗದಲ್ಲಿ ಜೋರು ಮಳೆಸುರಿದಿದೆ.
ರಸ್ತೆಗಳು ಜಲಾವೃತ: ಮುಂಜಾನೆ ತುಂತುರಿನೊಂದಿಗೆ ಆರಂಭವಾದ ಮಳೆ ಮಧ್ಯಾಹ್ನ ಬಳಿಕ ಚುರುಕುಪಡೆದುಕೊಂಡಿತ್ತು. ದಿಢೀರ್ ಸುರಿದ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡವು. ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಅಲ್ಲಲ್ಲಿ ಚರಂಡಿ ನೀರು ಉಕ್ಕಿ ರಸ್ತೆಯಲ್ಲಿ ಹರಿಯುತ್ತಿದ್ದ ದೃಶ್ಯ ಕಂಡುಬಂತು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಳೆಯಿಂದಾಗಿ ಕೆಲಕಾಲ ಅೋಷಿತ ಬಂದ್‌ನಂತ ವಾತಾವರಣ ಕಂಡುಬಂತು. ಪೇಟೆಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿದ್ದರೆ, ಸಾರ್ವಜನಿಕರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ-ಮುಂಗಟ್ಟುಗಳ ಮೊರೆ ಹೋದ ದೃಶ್ಯ ಸಾಮಾನ್ಯವಾಗಿತ್ತು.
ವಿದ್ಯಾರ್ಥಿಗಳ ಪರದಾಟ: ಸಂಜೆ ಸುಮಾರು 5 ಗಂಟೆ ವೇಳೆಗೆ ಗಂಟೆಗೂ ಹೆಚ್ಚುಕಾಲ ಜೋರು ಮಳೆಸುರಿದಿದ್ದರಿಂದ ಶಾಲೆಗಳಿಂದ ಮನೆಗಳತ್ತ ಹೊರಟ ವಿದ್ಯಾರ್ಥಿಗಳು ಪರದಾಡುವಂತಾಯಿತು. ಕೆಲವರು ಕೊಡೆಗಳನ್ನು ಹಿಡಿದು ಬಸ್‌ಗಳಿಗೆ ಕಾಯುತ್ತಿದ್ದ ದೃಶ್ಯ ಕಂಡುಬಂದರೆ ಮತ್ತೆ ಕೆಲವರು ಮಳೆಯಲ್ಲಿ ನೆನೆದುಕೊಂಡೇ ಬಸ್‌ಗಳತ್ತ ಓಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಗುಡುಗು ಸಹಿತ ಮಳೆಯಾಗಿದ್ದು ಎಲ್ಲಿಯೂ ಬಿರುಗಾಳಿ ಸಮಸ್ಯೆ ತಂದೊಡ್ಡಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net