ಬಾಂಗ್ಲಾದೇಶಿ ಅಕ್ರಮ ವಲಸಿಗರ ಪ್ರಕರಣ

  ಮೊಯಿದ್ದೀನ್ ಇಸ್ಲಾಂ  and ದಿಲ್ವಾರ್ ಹುಸೇನ್
ಮೊಯಿದ್ದೀನ್ ಇಸ್ಲಾಂ and ದಿಲ್ವಾರ್ ಹುಸೇನ್
Published on

ಪ್ರಮುಖ ಮುಖ್ಯಾಂಶಗಳು

  • ಮಂಗಳೂರಿನಲ್ಲಿ ಇಬ್ಬರು, ಕೋಲ್ಕತ್ತಾದಲ್ಲಿ ಒಬ್ಬ ದಲ್ಲಾಳಿ ಬಂಧನ
ಮಂಗಳೂರು: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಕಾರ್ಮಿಕರಾಗಿ ಅಕ್ರಮವಾಗಿ ನೆಲೆಸಿದ್ದ 11 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ರಮ ವಲಸಿಗರನ್ನು ಮಂಗಳೂರಿಗೆ ಕರೆತಂದು ಕೆಲಸಕ್ಕೆ ನಿಯೋಜಿಸಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಮಧ್ಯವರ್ತಿಗಳನ್ನು ಮಂಗಳೂರಿನಲ್ಲಿ ಹಾಗೂ ಮತ್ತೊಬ್ಬನನ್ನು ಕೋಲ್ಕತ್ತಾದಲ್ಲಿ ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ಮೊಯಿದ್ದೀನ್ ಇಸ್ಲಾಂ (35), ದಿಲ್ವಾರ್ ಹುಸೇನ್ (29) ಮತ್ತು ರಸೂಲ್ ಇಸ್ಲಾಂ ಬಂಧಿತರು. ಇವರು ಪಶ್ಚಿಮ ಬಂಗಾಳ ಸಹಿತ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಮಂಗಳೂರಿಗೆ ಕೆಲಸಕ್ಕಾಗಿ ಕರೆತರುತ್ತಿದ್ದರು. ಇದೇ ನೆಪದಲ್ಲಿ ಭಾರತೀಯ ಕಾರ್ಮಿಕರ ಜೊತೆಯಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಸಹ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಮಂಗಳೂರಿಗೆ ಕರೆತಂದು ಕಟ್ಟಡ ನಿರ್ಮಾಣದ ಕೆಲಸಕ್ಕೆ ಸೇರಿಸುತ್ತಿದ್ದರು ಎಂಬ ವಿಷಯ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಇಬ್ಬರು ಆರೋಪಿಗಳನ್ನು ಮಂಗಳೂರಿನಲ್ಲಿ ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿ ರಸೂಲ್ ಇಸ್ಲಾಂ ಪತ್ತೆಗಾಗಿ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್.ಎನ್. ಅವರು ಕೋಲ್ಕತ್ತಾ ಪೊಲೀಸರೊಂದಿಗೆ ಸಮನ್ವಯತೆ ಸಾಧಿಸಿ ಜಂಟಿ ಕಾರ್ಯಾಚರಣೆ ನಡೆಸಿ ಕೋಲ್ಕತ್ತಾದಲ್ಲಿ ಬಂಧಿಸಿದ್ದಾರೆ.
ಟ್ರಾನ್ಸಿಟ್ ವಾರಂಟ್ ಮೂಲಕ ಮಂಗಳೂರಿಗೆ:
ಕೋಲ್ಕತ್ತಾದಲ್ಲಿ ವಶಕ್ಕೆ ಪಡೆಯಲಾಗಿರುವ ಆರೋಪಿ ರಸೂಲ್ ಇಸ್ಲಾಂನನ್ನು ಟ್ರಾನ್ಸಿಟ್ ವಾರಂಟ್ ಮೂಲಕ ಮಂಗಳೂರಿಗೆ ಕರೆತರಲು ಮಂಗಳೂರು ನಗರ ಪೊಲೀಸರ ವಿಶೇಷ ತಂಡ ಪಶ್ಚಿಮ ಬಂಗಾಳಕ್ಕೆ ತೆರಳಿದೆ. ಆರೋಪಿಯನ್ನು ಮಂಗಳೂರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದ ಬಳಿಕ, ಈ ಅಂತರರಾಷ್ಟ್ರ ಅಕ್ರಮ ವಲಸೆ ಜಾಲದಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಬಹುದು. ಕರಾವಳಿ ಭಾಗದಲ್ಲಿ ಇನ್ನುಳಿದ ಎಲ್ಲೆಲ್ಲಿ ಸ್ಥಳಗಳಲ್ಲಿ ಇಂತಹ ವಲಸಿಗರನ್ನು ನಿಯೋಜಿಸಲಾಗಿದೆ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net