

ಹರಿಹರ: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲಿನ ಅನಾಚಾರ ಮತ್ತು ದೌರ್ಜನ್ಯ ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ ಹರಿಹರ ತಾಲೂಕು ಘಟಕದಿಂದ ಸೋಮವಾರ ಗ್ರೇಡ್-2 ತಹಸೀಲ್ದಾರ್ ಪುಷ್ಪಲತಾ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಹಿಂದು ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಗಾಂಧಿ ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ಹಿಂದುಗಳ ರಕ್ಷಣೆ ಮಾಡುವ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ನೆರೆಯ ಬಾಂಗ್ಲಾದೇಶವು ತೀವ್ರ ಹಿಂಸಾಚಾರದಿಂದ ಬಳಲುತ್ತಿದೆ. ಬಾಂಗ್ಲಾದ ಚುನಾಯಿತ ಪ್ರಧಾನಿ ರಾಜೀನಾಮೆ ನೀಡಿ ದೇಶ ತೊರೆದ ನಂತರ ಅಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಎಂದರು.
ಜಿಹಾದಿ ಮನಸ್ಥಿತಿಯ ವ್ಯಕ್ತಿಗಳು ಹಿಂದುಗಳು ಹಾಗೂ ಹಿಂದುಗಳ ಶ್ರದ್ಧಾಕೇಂದ್ರಗಳನ್ನೇ ಗುರಿ ಮಾಡಿಕೊಂಡು ದಾಳಿ ನಡೆಸುತ್ತಿರುವುದು ತೀವ್ರ ಖಂಡನೀಯ. ಇಂತಹ ಗಲಭೆಗಳಿಂದಾಗಿ ಹಿಂದುಗಳು ನಿರಂತರ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಬಾಂಗ್ಲಾ ದೇಶದಲ್ಲಿರುವ ಹಿಂದು ಅಲ್ಪಸಂಖ್ಯಾತರ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಭಾರತ ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಹಾದಿಗಳು ಭಾರತಕ್ಕೆ ಒಳನುಸುಳುವುದನ್ನು ತಡೆಯಲು ಭಾರತ- ಬಾಂಗ್ಲಾ ದೇಶದ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಅತಿಕ್ರಮಣಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮುಖಂಡರಾದ ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ದೂಡಾ ಮಾಜಿ ಸದಸ್ಯ ರಾಜು ರೋಖಡೆ, ಬಾತಿ ಚಂದ್ರಶೇಖರ್, ಹಿಂದು ಜಾಗರಣ ವೇದಿಕೆಯ ದಿನೇಶ್, ಕೃಷ್ಣಮೂರ್ತಿ ಶ್ರೇಷ್ಠಿ, ಶಿವಪ್ರಕಾಶ್ ಶಾಸ್ತ್ರಿ, ರಾಘವೇಂದ್ರ ಉಪಾಧ್ಯಾಯ, ಅಂಬುಜಾ ರಾಜೋಳಿ, ಪ್ರಮೀಳಾ ನಲ್ಲೂರ್ ಇತರರಿದ್ದರು.