

ಬೆಳ್ತಂಗಡಿ: ಮಡಂತ್ಯಾರು ಗ್ರಾಪಂಗೆ ಒಳಪಟ್ಟ ಪಾರೆಂಕಿ ಗ್ರಾಮದಲ್ಲಿ ಬಂಗೇರಕಟ್ಟ ಕೆರೆ ನಿರ್ವಹಣೆ ಇಲ್ಲದೆ ಹೂಳು ತುಂಬಿ ಅವಸಾನದಂಚಿನಲ್ಲಿದೆ.
ಮಚ್ಚಿನ ಗ್ರಾಮದಲ್ಲಿರುವ ಅನಂತೇಶ್ವರ ದೇವಸ್ಥಾನದಲ್ಲಿ ನಡೆಯುವ ಶೇಷನಾಗ ದೇವರಕಂಬಳಕ್ಕೆ 30 ವರ್ಷಗಳ ಹಿಂದೆ ಬಂಗೇರಕಟ್ಟ ಕೆರೆಯಿಂದ ನಾಲೆಗಳ ಮೂಲಕ ನೀರು ಹಾಯಿಸಲಾಗುತ್ತಿತ್ತು. ಕ್ರಮೇಣ ನಾಲೆಗಳೂ ಮುಚ್ಚಿಹೋಗಿವೆ. ಕೆರೆಯ ಸುತ್ತ ಪೊದೆ ಬೆಳೆದು ಆಕರ್ಷಣೆಯನ್ನೇ ಕಳೆದುಕೊಂಡಿದೆ. ನೀರಿನ ಮೇಲ್ಮಟ್ಟದಲ್ಲೇ ಹೂಳು ಕಾಣಿಸುತ್ತದೆ.
ಈ ಕೆರೆಯನ್ನು ಅಭಿವೃದ್ಧಿಗೊಳಿಸಿ ಕೃಷಿ, ಕುಡಿಯುವ ನೀರು ಮತ್ತು ಗ್ರಾಮೀಣ ಕೈಗಾರಿಕೆಗಳಿಗೆ ಈ ಕೆರೆಯ ನೀರು ಬಳಸಲು ಸಾಕಷ್ಟು ಸಾಧ್ಯತೆಗಳಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ನಿರ್ಲಕ್ಷೃಕ್ಕೆ ಒಳಗಾಗಿದೆ. ಗ್ರಾಮದ ಇನ್ನೊಂದು ಜಲಮೂಲ ಮಡಂತ್ಯಾರು ಪೇಟೆ ಸಮೀಪದಲ್ಲೇ ಇರುವ ಅಂಕರಕಟ್ಟ ಕೆರೆಯೂ ಇದೇ ರೀತಿ ಆಗಿದೆ.
ಕೆರೆ ಅಭಿವೃದ್ಧಿಗೆ ಹರೀಶ್ ಪೂಂಜ ಆಸಕ್ತಿ
ಬಂಗೇರ ಕಟ್ಟ ಕೆರೆ ಅಭಿವೃದ್ಧಿಗೆ 2009ರಲ್ಲಿ 30 ಲಕ್ಷ ರೂ.ನ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಬಳಿಕ ಇದು ಕಾರ್ಯರೂಪಕ್ಕೆ ಬರಲಿಲ್ಲ. ಪ್ರಸಕ್ತ ಕೆರೆ ಹೂಳೆತ್ತಿ, ತಡೆದಂಡೆ ಜತೆಗೆ ಪಾರ್ಕ್ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಆಸಕ್ತಿ ತೋರಿದ್ದು, ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಮಚ್ಚಿನ ಗ್ರಾಮಕ್ಕೆ ಅನುಕೂಲವಾಗಲಿದೆ.
ಮಡಂತ್ಯಾರು ಗ್ರಾಪಂಗೆ ಒಳಪಟ್ಟಂತೆ ಬಂಗೇರಕಟ್ಟ ಹಾಗೂ ಅಂಕರಕಟ್ಟ ಕೆರೆ ಅಭಿವೃದ್ಧಿಪಡಿಸುವುದು ಹಲವು ವರ್ಷದ ಬೇಡಿಕೆಯಾಗಿದೆ. ಶಾಸಕರು ಅನುದಾನದ ಮೂಲಕ ಕೆರೆ ಪುನಶ್ಚೇತನಗೊಳಿಸಲಾಗುವುದು.
ಪುರುಷೋತ್ತಮ ಜಿ., ಪಿಡಿಒ, ಮಡಂತ್ಯಾರು