

ಬಂಗಾರಪೇಟೆ: ತಾಲೂಕಿನ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಹಾಗೂ ಶಾಸಕ ಎಸ್.ಎನ್ ನಾರಾಯಣಸ್ವಾಮಿ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ತಹಸೀಲ್ದಾರ್ ಅವರನ್ನು ತಾಲೂಕಿನಿಂದ ಎತ್ತಂಗಡಿ ಮಾಡಿಸಲು ತೆರೆಮರೆಯಲ್ಲಿ ಕಾಣದ ಕೈಗಳು ಪ್ರಯತ್ನಿಸುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ತಾಲೂಕಿನಲ್ಲಿ ಈ ಹಿಂದೆ ತಹಸೀಲ್ದಾರ್ ಆಗಿದ್ದ ರಶ್ಮಿಅವರು ವರ್ಗಾವಣೆಗೊಂಡ ಬಳಿಕ ಆ ಸ್ಥಾನಕ್ಕೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರನ್ನು ಎಸ್.ವೆಂಕಟೇಶಪ್ಪ ಅವರನ್ನು ವರ್ಗಾವಣೆ ಮಾಡಿಸಿಕೊಂಡು ಬಂದರು.
ಎಸ್.ವೆಂಕಟೇಶಪ್ಪ ಅವರು ತಾಲೂಕಿಗೆ ತಹಸೀಲ್ದಾರ್ ಆಗಿ ಬಂದು ಕೇವಲ ನಾಲ್ಕು ತಿಂಗಳು ಕಳೆದಿದೆ. ಈಗ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮತ್ತು ತಹಸೀಲ್ದಾರ್ ನಡುವೆ ಕೆಲ ವಿಷಯದಲ್ಲಿ ಹೊಂದಾಣಿಕೆ ಕೊರತೆ ಕಂಡು ಬಂದಿದ್ದು, ಕಾಣದ ಕೈಗಳು ತಹಸೀಲ್ದಾರ್ ವರ್ಗಾವಣೆ ಮಾಡಿಸಲು ಮುಂದಾಗಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ದಯಾನಂದ್ ಹಾಗೂ ಶಾಸಕರ ನಡವೆ ಸಹ ಹೊಂದಾಣಿಕೆ ಕೊರತೆ ಎದುರಾಗಿ, ಕೆಲ ವೇದಿಕೆಗಳಲ್ಲಿ ಬಹಿರಂಗವಾಗಿ ಶಾಸಕರು ತಹಸೀಲ್ದಾರ್ ದಯಾನಂದ್ ಅವರನ್ನು ಟೀಕಿಸಿದ್ದರು. ಜತೆಗೆ ತಾಲೂಕಿನಿಂದ ಎತ್ತಂಗಡಿ ಮಾಡಲು ಯತ್ನಿಸಿದ್ದರು. ಆದರೆ ಎತ್ತಂಗಡಿಯಾದ ಮರುದಿನವೇ ತಹಸೀಲ್ದಾರ್ ಮತ್ತೆ ತಾಲೂಕಿಗೆ ವರ್ಗಾವಣೆಗೊಂಡು ಬಂದು ಶಾಸಕರಿಗೆ ಟಾಂಗ್ ನೀಡಿದ್ದರು. ಕೊನೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ನಂತರ ಬಂದ ಕಾಂಗ್ರೆಸ್ ಸರ್ಕಾರ ದಯಾನಂದ್ ಅವರನ್ನು ಎತ್ತಂಗಡಿ ಮಾಡಿತು.
ಅವರ ಸ್ಥಾನಕ್ಕೆ ಗ್ರೇಡ್ 2 ತಹಸೀಲ್ದಾರ್ ಆಗಿದ್ದ ರಶ್ಮಿ ಅವರು ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡರು. ಈಗ ಮತ್ತೆ ತಹಸೀಲ್ದಾರ್ ವೆಂಕಟೇಶಪ್ಪ ಅವರೊಂದಿಗೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ನಡುವಿನ ಹೊಂದಾಣಿಕೆ ಮುರಿದು ಬಿದ್ದಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಗುರುವಾರ ತಾಲೂಕು ಕಚೇರಿಯಲ್ಲಿ ನಡೆದ ದರಖಾಸ್ತು ಸಭೆಯಲ್ಲಿ ಶಾಸಕರು ಸೂಚಿಸಿದ ಕಡತವೊಂದಕ್ಕೆ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಸಹಿ ಹಾಕಲು ಸಮ್ಮತಿ ನೀಡದೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಶಾಸಕರು ತಹಸೀಲ್ದಾರ್ ವಿರುದ್ಧ ಮತ್ತಷ್ಟು ಕೆಂಡಾಮಂಡಲರಾದರು ಎಂಬ ವಿಚಾರ ಹರಿದಾಡುತ್ತಿದೆ.
ಈ ಘಟನೆಯಿಂದ ತಹಸೀಲ್ದಾರ್ ವರ್ಗಾವಣೆ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ತಹಸೀಲ್ದಾರ್ ಯಾವುದೇ ಕಾನೂನು ಬಾಹಿರ ಕಡತಗಳಿಗೆ ಸಹಮತ ನೀಡದೆ ಸಾರ್ವಜನಿಕರ ಹಿತದೃಷ್ಟಿಯಿಂದ ಮಾತ್ರ ಕೆಲಸ ಮಾಡಲು ಮುಂದಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಕೆಲವು ರಾಜಕೀಯ ಒತ್ತಡಗಳಿಗೆ ಮಣಿದು ಕೆಲಸ ಮಾಡುವಂತ ವಾತಾವರಣ ನಿಮಾರ್ಣವಾಗಿದ್ದು, ಇದಕ್ಕೆ ತಹಸೀಲ್ದಾರ್ ಸಹಕಾರ ನೀಡದ ಕಾರಣ ಅವರನ್ನು ತಾಲೂಕಿನಿಂದ ಎತ್ತಂಗಡಿ ಮಾಡಲು ಈಗಾಗಲೇ ವೇದಿಕೆ ಸಿದ್ಧವಾಗಿದೆ ಎಂಬ ವಿಚಾರ ತಿಳಿದು ಬಂದಿದೆ.