

ಬಂಗಾರಪೇಟೆ: ಸತತವಾಗಿ 3 ದಿನಗಳಿಂದ ರಾತ್ರಿ ವೇಳೆ ಭಾರಿ ಮಳೆ ಸುರಿಯುತ್ತಿರುವುದರಿಂದ ಪಟ್ಟಣದ ಕೆರೆ ಭಾನುವಾರ ರಾತ್ರಿ ಕೋಡಿ ಬಿದ್ದಿದೆ. ಸತತವಾಗಿ ಎದುರಾದ ಬರಗಾಲದಲ್ಲೂ ಈ ಕೆರೆ ಜನರಿಗೆ ಕುಡಿಯುವ ನೀರು ಒದಗಿಸುತ್ತಿತ್ತು. ಉತ್ತಮ ಮಳೆಯಾಗಿ ಕೆರೆ ತುಂಬಿದ್ದರಿಂದ ಅಂತರ್ಜಲ ವೃದ್ಧಿಯಾಗಿದೆ.
ಪ್ರಥಮ ಬಾರಿಗೆ ಕೆಸಿ ವ್ಯಾಲಿಯ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸ ಮಾಡಿದ್ದರೂ, ಬಂಗಾರಪೇಟೆ ಕೆರೆಗೆ ನೀರು ತರಲು ಸಾಧ್ಯವಾಗಿರಲಿಲ್ಲ. 3 ವರ್ಷಗಳ ಹಿಂದೆ 1 ಸಾವಿರ ಅಡಿ ಆಳ ಕೊರೆದರೂ ನೀರು ಸಿಗುತ್ತಿರಲಿಲ್ಲ. ಈಗ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ. ಹಿಂದೆ ತುಂಗಭದ್ರಾ ಡ್ಯಾಂನಿಂದ ರೈಲ್ವೆ ವ್ಯಾಗನ್ನಲ್ಲಿ ನೀರು ತುಂಬಿಸಿ ಜನತೆಗೆ ಪೂರೈಕೆ ಮಾಡಲಾಗಿತ್ತು. ಎಸ್.ಎನ್.ನಾರಾಯಣಸ್ವಾಮಿ ಶಾಸಕರಾದ ಮೇಲೆ ಮುತುವರ್ಜಿವಹಿಸಿ ಕುಂಟಿತಗೊಂಡಿದ್ದ ಯರಗೋಳ್ ಯೋಜನೆಗೆ ವೇಗ ಹೆಚ್ಚಿಸಿ ನೀರು ಪೂರೈಕೆಗೆ ಕ್ರಮ ವಹಿಸಿದ್ದರು.