ಬಿಜೆಪಿ ನೆಲಕಚ್ಚಿದಾಗ ಆಸರೆಯಾಗಿದ್ದೇ ಬಂಗಾರಪ್ಪ

Ayanur manjunath
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ
Published on

ಶಿವಮೊಗ್ಗ: ಮಾಜಿ ಸಿಎಂ ಎಸ್.ಬಂಗಾರಪ್ಪ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಚೇಲಾಗಳು ಗೆಲ್ಲಿಸಲಿಲ್ಲ. ಬದಲಾಗಿ ಬಂಗಾರಪ್ಪ ಅವರೇ ಅಂದು ಬಿಜೆಪಿಯನ್ನು ಗೆಲ್ಲಿಸಿದ್ದರು. ಅವರಿಂದ ಬಿಜೆಪಿಗೆ ಅಗಾಧ ಲಾಭವಾಗಿದೆ ಎಂಬುದರ ಅರಿವು ಸಂಸದ ಬಿ.ವೈ.ರಾಘವೇಂದ್ರ ಅವರಿಗಿರಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಟಾಂಗ್ ನೀಡಿದರು.

ರಾಜಕೀಯವಾಗಿ ಟೀಕೆ ಮಾಡುವಾಗ ಜಾಗರೂಕರಾಗಿರಬೇಕು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ಭರದಲ್ಲಿ ರಾಘವೇಂದ್ರ ಅವರು ಬಂಗಾರಪ್ಪ ಅವರನ್ನು ಗೆಲ್ಲಿಸಿದ್ದು ಬಿಜೆಪಿ ಚೇಲಾಗಳೇ ಎಂದು ಹೇಳಿದ್ದಾರೆ. 2004ರ ಲೋಕಸಭಾ ಚುನಾವಣೆಯ ರಾಜಕೀಯ ಪಿಚ್‌ನಲ್ಲಿ ರಾಘವೇಂದ್ರ ಇರಲಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
1999ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಲ್ಲಿ, ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಸೋತಿದ್ದರು. ಇಡೀ ರಾಜ್ಯದಲ್ಲಿ ಅಂದು ಬಿಜೆಪಿ ನೆಲಕಚ್ಚಿತ್ತು. 2000ರ ಲೋಕಸಭಾ ಚುನಾವಣೆಯಲ್ಲಿ ನಾನು ಶಿವಮೊಗ್ಗದಲ್ಲಿ ಸೋತಿದ್ದೆ. ಯಡಿಯೂರಪ್ಪ, ಈಶ್ವರಪ್ಪ ಒಳಗೊಂಡಂತೆ ಇಡೀ ರಾಜ್ಯದಲ್ಲಿ ಬಿಜೆಪಿ ರಾಜಕೀಯ ಶರಣಾಗತಿಯಾಗಿತ್ತು. ಈ ಕಾರಣದಿಂದ ಬಿಜೆಪಿ ನಾಯಕರು ರಾಜಕೀಯವಾಗಿ ಧೃತಿಗೆಟ್ಟಿದ್ದರು. ಅಂದು ಕಾಂಗ್ರೆಸ್‌ನಲ್ಲಿದ್ದ ಎಸ್.ಬಂಗಾರಪ್ಪ ಅವರನ್ನು ಮಾಜಿ ಸಚಿವ ಅನಂತ್‌ಕುಮಾರ್ ಮೂಲಕ ಬಿಜೆಪಿಗೆ ಕರೆತರಲಾಗಿತ್ತು ಎಂದರು.
ಬಂಗಾರಪ್ಪ ಬಿಜೆಪಿಗೆ ಬಂದಿದ್ದರಿಂದ ನನಗೆ ಎಂಪಿ ಟಿಕೆಟ್ ತಪ್ಪಿತು. ಅಂದು ಶಿಕಾರಿಪುರದಲ್ಲಿ ಯಡಿಯೂರಪ್ಪ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈಶ್ವರಪ್ಪ ಮತ್ತು ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಂಗಾರಪ್ಪ ಸೂಚಿಸಿದ್ದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಶಿಕಾರಿಪುರ ಮತ್ತು ಶಿವಮೊಗ್ಗ ಕ್ಷೇತ್ರ ಗೆದ್ದರೆ ಸಾಕು ಎಂಬಂತಹ ಸ್ಥಿತಿ ಬಿಜೆಪಿಯಲ್ಲಿತ್ತು. ಆ ಸಂದರ್ಭ ಉಂಟಾದ ರಾಜಕೀಯ ಪಲ್ಲಟದಲ್ಲಿ ನಾನು ಕಾಂಗ್ರೆಸ್‌ಗೆ ಬಂದಿದ್ದೆ. ಬಳಿಕ ಕಿಮ್ಮನೆ ರತ್ನಾಕರ್ ಕೂಡ ಬಂದರು. ಇದಿಷ್ಟು ರಾಘವೇಂದ್ರ ಅವರಿಗೆ ಗೊತ್ತಿಲ್ಲ ಎಂದು ಕಾಲೆಳೆದರು.
ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಜಿ.ಪದ್ಮನಾಭ, ಆಯನೂರು ಸಂತೋಷ್, ಹಿರಣಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net